Breaking News

Nag-panchami-date-history-significance

ನಾಗರ ಪಂಚಮಿ ಹಬ್ಬದ ಹಿನ್ನೆಲೆ ತಿಳಿದುಕೊಳ್ಳಿ

ನಾಗರ ಪಂಚಮಿ ಹಬ್ಬದ ಹಿನ್ನೆಲೆ ತಿಳಿದುಕೊಳ್ಳಿ | [Nagarapanchami History] : ಶ್ರಾವಣ ಮಾಸವನ್ನು ಹಬ್ಬಗಳ ಮಾಸ ಎಂದು ಕರೆಯಲಾಗುತ್ತದೆ. ಈ ತಿಂಗಳಲ್ಲಿ ಸಾಲಾಗಿ ಅನೇಕ ಹಬ್ಬಗಳಿದೆ. ಒಂದೆಲ್ಲಾ ಒಂದು ವಿಶೇಷ ಹಬ್ಬ ಹಾಗೂ ಆಚರಣೆ ಮಾಡಲಾಗುತ್ತದೆ. ಮುಖ್ಯವಾಗಿ ಈ ಮಾಸದಲ್ಲಿ ಶಿವ ಹಾಗೂ ವಿಷ್ಣುವಿನ ಆರಾಧನೆ ಮಾಡಲಾಗುತ್ತದೆ.

ನಮ್ಮ ಸನಾತನ ಧರ್ಮದಲ್ಲಿ ದೇವರನ್ನು ಸಮಗ್ರ ರೂಪದಲ್ಲಿ ಕಾಣುವ ಸಂಪ್ರದಾಯವಿದೆ. ಈ ಕಾರಣಕ್ಕಾಗಿ, ನಾವು ದೇವರನ್ನು ಪ್ರತಿಯೊಂದು ವಸ್ತುವಿನಲ್ಲಿ, ಗಿಡ – ಮರಗಳಲ್ಲಿ, ಜೀವಿಗಳಲ್ಲಿ ನೋಡುತ್ತೇವೆ ಮತ್ತು ಅವುಗಳನ್ನು ಪೂಜಿಸುತ್ತೇವೆ. ನಮ್ಮ ಧಾರ್ಮಿಕ ಸಂಪ್ರದಾಯದಲ್ಲಿ ಗಿಡ – ಮರಗಳನ್ನು, ಪ್ರಾಣಿ – ಪಕ್ಷಿಗಳನ್ನು ವಿಶೇಷ ಸಂದರ್ಭಗಳಲ್ಲಿ ಪೂಜಿಸಲಾಗುತ್ತದೆ. ಇದಕ್ಕೆ ಉತ್ತಮ ಉದಾಹರಣೆಯೆಂದರೆ, ಅದುವೇ ನಾಗರ ಪಂಚಮಿ ಹಬ್ಬ. ಈ ಹಬ್ಬದಲ್ಲಿ ಸರ್ಪಗಳನ್ನು ದೇವರ ರೂಪವೆಂದು ಪರಿಗಣಿಸಿ ಪೂಜಿಸಲಾಗುತ್ತದೆ.

ಈ ದಿನವನ್ನ ನಾಗದೇವರಿಗೆ ಅರ್ಪಣೆ ಮಾಡಲಾಗಿದೆ. ಈ ದಿನ ನಾಗದೇವರನ್ನ ಪೂಜೆ ಮಾಡಿದರೆ ಶಿವನ ಆಶೀರ್ವಾದ ಸಿಗುತ್ತದೆ ಹಾಗೂ ವಿವಿಧ ದೋಷಗಳಿಂದ ಮುಕ್ತಿ ಸಿಗುತ್ತದೆ ಎನ್ನುವ ನಂಬಿಕೆ ಇದೆ. ಹಾಗಾಗಿ ಈ ದಿನ ಹುತ್ತಕ್ಕೆ ಹಾಲನ್ನ ಎರೆಯಲಾಗುತ್ತದೆ.

ಇನ್ನು ಈ ಮಾಸದ ಮೊದಲ ಹಬ್ಬ ಎಂದರೆ ಅದು ನಾಗರ ಪಂಚಮಿ. ಸಾಮಾನ್ಯವಾಗಿ ಈ ಹಬ್ಬವನ್ನು ಶುಕ್ಲ ಪಕ್ಷದ ಐದನೇ ದಿನದಂದು ಆಚರಿಸಲಾಗುತ್ತದೆ. ಈ ವರ್ಷ ಆಗಸ್ಟ್ 21 ಸೋಮವಾರದಂದು ಹಬ್ಬವನ್ನ ಆಚರಿಸಲಾಗುತ್ತದೆ.

ಪಂಚಮಿಯ ನಂತರ ಕೃಷ್ಣ ಪಕ್ಷದಲ್ಲಿ ಚಂದ್ರನು ಕ್ಷೀಣ ಗತಿಗೆ, ಶುಕ್ಲ ಪಕ್ಷದಲ್ಲಿ ವೃದ್ಧಿ ಗತಿಯತ್ತ ಸಾಗುತ್ತಾನೆ.  ಅಮವಾಸ್ಯೆಯಿಂದ ಶುದ್ಧ ಪಂಚಮಿಯ ವರೆಗೆ ಚಂದ್ರನು ಪೂರ್ಣ ಕ್ಷೀಣನಾಗಿ ವೃದ್ಧಿಯತ್ತ, ಹುಣ್ಣಿಮೆಯಿಂದ ಬಹುಳ ಪಂಚಮಿಯ ವರೆಗೆ ಸಾಗುವ ಈ ಸಮಯವು ಮನಸ್ಸಿನ ಹತೋಟಿಯನ್ನು ಕಳೆದುಕೊಳ್ಳುವ ಸಮಯವಾಗಿದೆ. ಅಂದರೆ, ಆಯಾ ವ್ಯಕ್ತಿಯ ಜಾತಕಕ್ಕೆ ಅನುಗುಣವಾಗಿ ಆಯಾಯ ವ್ಯಕ್ತಿಯಲ್ಲಿ ಇರುವ ಮನೋಭಾವನೆಗಳು ತೀವ್ರತೆಯನ್ನು ಪಡೆದುಕೊಳ್ಳುವ ಕಾಲ ಇದಾಗಿದೆ. ಇಂತಹ ಸಂದರ್ಭಗಳಲ್ಲಿ ಮನಸ್ಸಿನ ನಿಯಂತ್ರಣಕ್ಕಾಗಿ ವೃತಗಳ ಮೂಲಕ ಪರಿಹಾರ ಕಂಡುಕೊಂಡರು. ಇಂತಹ ವ್ರತ, ಹಬ್ಬಗಳಲ್ಲಿ ನಾಗರ ಪಂಚಮಿಯೂ ಒಂದು.

ನಾಗರ ಪಂಚಮಿ ಪೌರಾಣಿಕ ಹಿನ್ನೆಲೆಯ ಕಥೆ

ಪರೀಕ್ಷತ್ ರಾಜನಿಗೆ ಋಷಿ ಶಾಪದಿಂದಾಗಿ ಸರ್ಪದಿಂದ ಸಾಯುವ ಸಮಯ ಬರುತ್ತದೆ. ಆಗ ಅವನ ಮಗ ಜನಮೇಜಯನು ಕೋಪಿಷ್ಟನಾಗಿ ಸರ್ಪಸತ್ರ ಮಾಡಿಸುತ್ತಾನೆ. ಅದರಲ್ಲಿ 86 ಪ್ರಭೇದಗಳ ಸರ್ಪ ಸಂಕುಲ ನಾಶ ಆಗುತ್ತದೆ. ಅದಲ್ಲದೆ ಅರ್ಜುನನ ಕಾಂಡವ ದಹನದಲ್ಲೂ ಸರ್ಪಗಳು ನಾಶವಾಗುತ್ತದೆ. ಇದು ಕೇವಲ ಕೃತ್ಯ ಮಾಡಿದ ವಂಶಕ್ಕೆ ಮಾತ್ರವಲ್ಲ,ಇಡೀ ದೇಶಕ್ಕೇ ದೋಷವಾಗುತ್ತದೆ. ಇದಕ್ಕಾಗಿಯೇ ಋಷಿಗಳು ಪರಿಹಾರಾರ್ಥವಾಗಿ ನಾಗಾರಾಧನೆ ಮಾಡಲು ಹೇಳಿದರು. ಅಂದಿನಿಂದ ಇಂದಿಗೂ ಇದು ನಡೆಯುತ್ತಲೇ ಇದೆ.

ಅಣ್ಣ-ತಂಗಿ ಬಾಂಧವ್ಯದ ನಾಗರ ಪಂಚಮಿ ಹಬ್ಬ

ನಾಗರ ಪಂಚಮಿ ಹಬ್ಬವನ್ನು ‘ಗರುಡ ಪಂಚಮಿ’ ಎಂದು ಸಹ ಕರೆಯಲಾಗುತ್ತದೆ. ಇದಕ್ಕೆ ಕಾರಣ ಇದು ಸೋದರ ಮತ್ತು ಸೋದರಿಯ ನಡುವಿನ ಸೋದರತ್ವವನ್ನು ಗಟ್ಟಿಗೊಳಿಸುತ್ತದೆ. ಯಾವುದೋ ಕಾರಣದಿಂದ ಸೋದರ ಸೋದರಿಯ ನಡುವೆ ಮನಸ್ತಾಪ ಉಂಟಾಗಿ ದೂರ ದೂರವಿದ್ದರೂ, ಇಂದಿನ ದಿನ ಪರಸ್ಪರ ಭೇಟಿಯಾಗುತ್ತಾರೆ.

ಇದರ ಆರಂಭವೇ ಭೀಮನ ಅಮಾವಾಸ್ಯೆ. ಅಂದು ಭಂಡಾರ ಎಂಬ ತಿಂಡಿಯನ್ನು ಮಾಡುತ್ತಾರೆ. ಸೋದರಿಯರು ಇದನ್ನು ಮುಂಬಾಗಿಲ ಎರಡು ಬದಿಗಳಲ್ಲಿ ಇಡುತ್ತಾರೆ. ಇದನ್ನು ಸೋದರರು ಕೆಲವು ಕಡೆ ತಮ್ಮ ಮೊಣ ಕೈಯಿಂದ, ಇನ್ನೂ ಕೆಲವು ಕಡೆ ತಮ್ಮ ಮುಷ್ಟಿಯಿಂದ ನಿಧಾನವಾಗಿ ಸ್ಪರ್ಶಿಸುತ್ತಾರೆ. ಇದನ್ನು ಸಹೋದರರೆಲ್ಲದೆ ಬೇರಾರು ತಿನ್ನಲೇಬಾರದು. ಇದರಿಂದಾಗಿ ಕಷ್ಟ ನಷ್ಟದ ಸಮಯದಲ್ಲಿ ಸೋದರಿಯ ಸಹಾಯ ಸಹಾಯಕರ ದೊರೆಯುತ್ತದೆ. ಸಹಾಯ ಸಹಕಾರ ಎಂದ ಮಾತ್ರಕ್ಕೆ ಅದು ಬರೀ ಹಣವಲ್ಲ. ಸೋದರಿಯರ ಆಶೀರ್ವಾದಕ್ಕೆ ಹೆಚ್ಚಿನ ಶಕ್ತಿ ಇರುತ್ತದೆ.

ಆನಂತರ ಬರುವುದೇ ನಾಗ ಚೌತಿ. ಈ ತಿಂಗಳ 20ನೆಯ ದಿನಾಂಕದಂದು ನಾಗಚೌತಿ ಬರುತ್ತದೆ. ಮತ್ತೊಂದು ಅತಿ ಮುಖ್ಯವಾದ ವಿಚಾರವೆಂದರೆ ನಾಗಚೌತಿ ಮತ್ತು ನಾಗ ಪಂಚಮಿ ಎಂದು ಒಗ್ಗರಣೆಯನ್ನು ಸಹ ಹಾಕುವುದಿಲ್ಲ. ಅಷ್ಟೇ ಏಕೆ ತಲೆಗೆ ಶಾಂಪೂ ಅಥವಾ ಸಾಬುನನ್ನು ಹಚ್ಚಿ ನೀರನ್ನು ಸಹ ಹಾಕಿಕೊಳ್ಳುವುದಿಲ್ಲ.

ಚೌತಿಯ ದಿನ ನಾಗಪ್ಪನ ವಿಗ್ರಹಕ್ಕೆ ತನಿಯನ್ನು ಎರೆಯುತ್ತಾರೆ. ಇದಕ್ಕೆ ಅತ್ತೆ ತನಿ ಎಂಬ ಹೆಸರಿದೆ. ಕಾರಣ ಈ ತನಿಯನ್ನು ಎರೆಯುವುದು ಆ ಕುಟುಂಬದ ಅತ್ತೆ. ಇದು ಕಷ್ಟದ ಆಚರಣೆ ಆಗುತ್ತದೆ. ಕಾರಣ ಒದ್ದೆ ಬಟ್ಟೆಯಲ್ಲಿ ತನಿಯನ್ನು ಎರೆಯಬೇಕು. ಬಿಸಿ ಕಾಫಿ, ನೀರು, ಹಾಲು ಪ್ರತಿಯೊಂದು ಪದಾರ್ಥಗಳು ನಿಷೇಧಿತವಾಗಿರುತ್ತದೆ. ಒಮ್ಮೆ ಆರಂಭಿಸಿ ಬಿಟ್ಟರೆ ಇದನ್ನು ನಿಲ್ಲಿಸುವಂತಿಲ್ಲ. ಅಂದಿನ ದಿನ ಉಪ್ಪನ್ನು ಮುಟ್ಟಲೇ ಬಾರದು. ಹಾಗೆಯೇ ಯಾವುದೇ ಆಹಾರ ಪದಾರ್ಥವನ್ನು ಹುರಿಯುವುದು ಮತ್ತು ಕರಿಯುವುದನ್ನು ಸಂಪೂರ್ಣ ನಿಷೇಧಿಸಬೇಕು. ಒಂದು ವೇಳೆ ಇದನ್ನು ಮಾಡಿದರೆ ನಾಗಪ್ಪನ ಬೆನ್ನು ಸುಟ್ಟಂತೆ ಎಂದು ಕೆಲ ಹಿರಿಯರು ಹೇಳುತ್ತಾರೆ. ತನ್ನಿ ಎರೆಯುವವರು ಆ ದಿನ ತಣ್ಣನೆಯ ನೀರಿನಲ್ಲಿ ಸ್ನಾನವನ್ನು ಮಾಡಬೇಕು.

ದೇವರಿಗೆ ನೈವೇದ್ಯವಾಗಿ ಹಸಿ ತಂಬಿಟ್ಟನ್ನು ತಯಾರಿಸಬೇಕು. ಇದರೊಂದಿಗೆ ಹುರಿಯದೆ ಎಳ್ಳಿನಿಂದ ಹಸಿ ಚಿಗುಳಿಯನ್ನು ತಯಾರಿಸಬೇಕು. ಬಾಳೆಹಣ್ಣು ತೆಂಗಿನ ಕಾಯಿಯನ್ನು ಬಳಸಬಹುದು. ಹೆಸರು ಬೇಳೆಗೆ ಉಪ್ಪನ್ನು ಹಾಕದೆ ಕೇವಲ ಕಾಯಿ ತುರಿ ಬೆರೆಸಬೇಕು. ನಾಗಪ್ಪನ ವಿಗ್ರಹಕ್ಕೆ ಮೊದಲು ಹಾಲು ಮತ್ತು ತುಪ್ಪದಿಂದ ಅಭಿಷೇಕವನ್ನು ಮಾಡಬೇಕು. ಆನಂತರ ಅರಿಶಿನ, ಕುಂಕುಮ, ಅಕ್ಷತೆ, ಹೂವು ,ಗಂದಾ, ಗೆಜ್ಜೆ ವಸ್ತ್ರಗಳಿಂದ ಅರ್ಚಿಸಬೇಕು. ನಂತರ ಧೂಪದೀಪಗಳಿಂದ ನಾಗಪ್ಪನನ್ನು ಪೂಜಿಸಬೇಕು. ಅಕ್ಷತೆಯಾಗಿ ನೆನೆಸಿದ ಹಸಿ ಕಡಲೆಕಾಳನ್ನು ಬಳಸಬೇಕು. ಆನಂತರ ಬ್ರಹ್ಮಚಾರಿಗೆ ಉಪ್ಪಿಲ್ಲದೆ ತಯಾರಿಸಿದ ಹೆಸರು ಬೇಳೆ ಮುಂತಾದವುಗಳನ್ನುದಕ್ಷಿಣಯ ಸಹಿತ ನೀಡಬೇಕು.

ನಾಗರ ಪಂಚಮಿಯ ಬಗ್ಗೆ ಒಂದು ಸೊಗಸಾದ ಕಥೆ

ಮಾರನೆಯ ದಿನ ಅಂದರೆ ಸೋಮವಾರ 21ನೆಯ ದಿನಾಂಕ ಬರುವುದೇ ನಾಗರ ಪಂಚಮಿ ಅಥವಾ ಗರುಡ ಪಂಚಮಿ. ನಾಗರ ಪಂಚಮಿಯ ಬಗ್ಗೆ ಒಂದು ಸೊಗಸಾದ ಕಥೆ ಇದೆ. ಒಂದೂರಿನಲ್ಲಿ ಒಬ್ಬ ಬಡವನಿರುತ್ತಾನೆ. ಅವನಿಗೆ ಅಕ್ಮಂಜಿ ಎಂಬ ಮಗಳಿರುತ್ತಾಳೆ. ಆಕೆಯು ಈ ನಾಗರ ಪಂಚಮಿ ವ್ರತವನ್ನು ಚಿಕ್ಕ ವಯಸ್ಸಲ್ಲಿಯೇ ಭಯ ಭಕ್ತಿಗಳಿಂದ ಆಚರಿಸುತ್ತಿದ್ದಳು. ಒಮ್ಮೆ ಪೂಜಾ ಕಾರ್ಯಕ್ಕೆ ಅಣಿಗೊಂಡು ತನ್ನ ಸೋದರರನ್ನು ಕರೆದು ಪೂಜೆಗಾಗಿ ಹಣ್ಣು ಮತ್ತು ಹೂಗಳನ್ನು ತಂದುಕೊಡಲು ಕೇಳುತ್ತಾಳೆ.

ತಂಗಿಯ ಮಾತನ್ನು ಪೂರೈಸಲು ಸೋದರರು ಕೇದಿಗೆಯ ಹೂವನ್ನು ತರಲು ಹೊರಡುತ್ತಾರೆ. ಆದರೆ ದುರಾದೃಷ್ಟ ಅಲ್ಲಿಯೇ ಕಾದಿರುತ್ತದೆ. ಅಲ್ಲಿ ಅಡಗಿದ್ದ ನಾಗರಹಾವು ಸೋದರರ ಕೈಗೆ ಕಚ್ಚುತ್ತದೆ. ಕ್ಷಣಮಾತ್ರದಲ್ಲಿ ದೇಹವನ್ನೆಲ್ಲ ವಿಷವು ವ್ಯಾಪಿಸಿ ಅಲ್ಲಿಯೇ ನೆಲದ ಮೇಲೆ ಬೀಳುತ್ತಾರೆ.

ಕೆಲ ಜನರಿಂದ ಈ ಘಟನೆಯ ಬಗ್ಗೆ ತಿಳಿದ ಅಕ್ಮಂಜೆಯು ತನ್ನ ಆರಾಧ್ಯ ದೈವವಾದ ನಾಗಪ್ಪನನ್ನು ಪೂಜಿಸಿ ಸೋದರರನ್ನು ಬದುಕಿಸಲು ಕೇಳುತ್ತಾಳೆ. ದೇವರ ಪ್ರಸಾದಕ್ಕೆಂದು ನೆನೆಸಿದ ಅಕ್ಕಿ, ಕಡಲೆಕಾಳು, ಬಾಳೆಯಹಣ್ಣು,ಚಿಗಲಿ, ತಂಬಿಟ್ಟು, ತೆಂಗಿನಕಾಯಿ,ಭತ್ತದಅರಳು, ಹುರಿಗಡಲೆ, ಹುಣಿಸೆಕಾಯಿ ಎಲ್ಲವನ್ನು ತೆಗೆದುಕೊಂಡು ಸೋದರರು ಪ್ರಾಣತ್ಯಾಗ ಮಾಡಿದ ಸ್ಥಳಕ್ಕೆ ಆಗಮಿಸುತ್ತಾಳೆ. ಅಲ್ಲಿಯೇ ಹುತ್ತದ ಮಣ್ಣಿನಿಂದ ಮಾಡಿದ ನಾಗಪ್ಪನನ್ನು ಷೋಡಶೋಪಚಾರ ಪೂಜೆಯ ಮೂಲಕ ಅರ್ಚಿಸುತ್ತಾಳೆ. ಆನಂತರ ಹುಟ್ಟದ ಮಣ್ಣು, ಹೂ ಕೊನೆ, ತನಿಎರೆದ ಹಾಲು ,ತುಪ್ಪ, ಅಕ್ಷತೆಯನ್ನು ತಂದು ಸಹೋದರರ ಮೇಲೆ ಸಿಂಪಡಿಸುತ್ತಾಳೆ.

ಆಶ್ಚರ್ಯವೆಂಬಂತೆ ತಕ್ಷಣವೇ ಆ ಸೋದರರು ಏನೂ ಆಗಿಲ್ಲವೆಂಬಂತೆ ಎದ್ದು ಕೂಡುತ್ತಾರೆ. ಎಲ್ಲರನ್ನೂ ಕುರಿತು ನಾವೇಕೆ ಇಷ್ಟು ಹೊಟ್ಟು ಮಲಗಿದ್ದೆವು ಎಂದು ಕೇಳುತ್ತಾರೆ. ಆಗ ಸಂತಸದಿಂದ ಅಕ್ಮಂಜಿಯು ನಾಗಪ್ಪನನ್ನು ಕುರಿತು ಹರಿಗೆ ಹಾಸಿಗೆಯಾಗು, ಹರಗೆ ಕಂಠಮಾಲೆಯಾಗು, ಹೆಣ್ಣು ಮಕ್ಕಳು ಪೂಜಿಸಿ ದಾಗ ಬೇಡುವ ವರವನ್ನು ಕೊಡುವ ನಾಗದೇವ ನಾಗು ಎಂದು ಹೇಳುತ್ತಾಳೆ.

ಅಂದಿನಿಂದ ಹೆಣ್ಣು ಮಕ್ಕಳು ಈ ಪೂಜೆಯನ್ನು ಮಾಡಿ ಸೋದರ ಬೆನ್ನು ತೊಳೆದು ತಮಗೆ ಇಷ್ಟವಾದ ವರಗಳನ್ನು ಪಡೆಯುತ್ತಿದ್ದಾರೆ. ಮೊದಲು ಸಹೋದರರಿಗೆ ತಿಂಡಿ ಅಥವಾ ಊಟವನ್ನು ನೀಡಬೇಕು. ಆನಂತರ ಬೆನ್ನಿಗೆ ಮೊದಲು ಅರಿಶಿನ ಮತ್ತು ಕುಂಕುಮವನ್ನು ಹಚ್ಚಬೇಕು. ಆನಂತರ ಕಡಲೆ ಕಾಡನ್ನು ಬೆನ್ನಿಗೆ ಹಾಕಬೇಕು. ಸೋದರ ಸೋದರಿಯರು ಪರಸ್ಪರ ಹೊಸ ಬಟ್ಟೆಗಳು ಮತ್ತು ದಕ್ಷಿಣೆ ಸಮೇತ ತಾಂಬೂಲವನ್ನು ನೀಡಬೇಕು. ಆನಂತರ ಚಿಕ್ಕವರು ದೊಡ್ಡವರಿಗೆ ನಮಿಸಿ ಆಶೀರ್ವಾದವನ್ನು ಪಡೆಯಬೇಕು. ಇದರಿಂದ ಸೋದರಿಯು ಮಾಡುವ ಪೂಜೆಯಿಂದಾಗಿ ಸೋದರರ ಜೀವನದಲ್ಲಿ ಎದುರಾಗುವ ಯಾವುದೇ ಕಷ್ಟ ನಷ್ಟಗಳು ಅಡ್ಡಿ ಆತಂಕಗಳು ಪರಿಹಾರವಾಗುವುದು ಎಂದು ಹೇಳಲಾಗಿದೆ.

Leave a Reply

Your email address will not be published. Required fields are marked *