Breaking News

ನಿಯತ್ತಿನಿಂದ ಬದುಕುವವರನ್ನು ದೇವರು ಕೈ ಬಿಡುವುದಿಲ್ಲ | Kannada Moral Stories 10

ನಿಯತ್ತಿನಿಂದ ಬದುಕುವವರನ್ನು ದೇವರು ಕೈ ಬಿಡುವುದಿಲ್ಲ | Kannada Moral Stories 10

ಒಂದು ಸಾರಿ ಧಾರಾನಗರದ ರಾಜ ಭೋಜರಾಜನು ಚಿತ್ರ ಪ್ರದರ್ಶನದ ಸ್ಪರ್ಧೆಯನ್ನು ಏರ್ಪಡಿಸಿದನು.

ಭೋಜರಾಜನು ತನ್ನ ಮಂದಿರದಲ್ಲಿ ಅಲಂಕರಿಸಲು ಸುಂದರವಾದ ಚಿತ್ರಗಳನ್ನು ಕೊಂಡುಕೊಳ್ಳವ ನಿಮಿತ್ತವಾಗಿ ಮನೋಹರವಾದ ಚಿತ್ರಗಳನ್ನು ಬರೆದು ತಂದವರಿಗೆ ಒಳ್ಳೆಯ ಬಹುಮಾನ ಕೊಡುವುದಾಗಿ ರಾಜನು ದೇಶದಲ್ಲೆಲ್ಲಾ ಪ್ರಕಟಪಡಿಸಿದ್ದನು.

ಇದನ್ನು ಕೇಳಿ ಅನೇಕ ಮಂದಿ ಚಿತ್ರಕಾರರು ತಾವು ಚಿತ್ರಿಸಿದ ಚಿತ್ರಗಳನ್ನು ಎತ್ತಿಕೊಂಡು ಧಾರಾನಗರಕ್ಕೆ ಹೊರಟರು.

ಧಾರಾನಗರದ ಸಮೀಪದಲ್ಲಿದ್ದ ಒಂದು ಊರಿನ ಛತ್ರದಲ್ಲಿ ಒಂದುದಿನ ರಾತ್ರಿ ಬೇರೆಬೇರೆ ಕಡೆಯಿಂದ ಬಂದ ಇಬ್ಬರು ಚಿತ್ರಕಾರರು ಸಂಧಿಸಿಕೊಂಡರು. ಬೆಳಗಾದ ಮೇಲೆ ಧಾರಾನಗರಕ್ಕೆ ಹೋಗುವುದು ಅವರ ಸಂಕಲ್ಪ.

ಒಬ್ಬನು ಮತ್ತೊಬ್ಬನೊಂದಿಗೆ ತನ್ನ ಪರಿಚಯ ಹೇಳುತ್ತ, “ನನ್ನ ಹೆಸರು ಚಾರುಗುಪ್ತ. ನನಗೆ ಹಂಸಗಳು, ಜಿಂಕೆಗಳು, ಸರೋವರ, ಪದ್ಮ ಮುಂತಾದುವೆಲ್ಲಾ ಬಹಳ ಹಿಡಿಸುವಂಥವು. ಆದುದರಿಂದ ಪ್ರಕೃತಿಯಲ್ಲಿರುವ ಮನೋಹರವಾದ ಈ ದೃಶ್ಯಗಳನ್ನೇ ಚಿತ್ರಗಳಾಗಿ ಬರೆದಿದ್ದೇನೆ. ಇವುಗಳನ್ನು ನಾಳಿನ ಸ್ಪರ್ಧೆಯಲ್ಲಿ ಪ್ರದರ್ಶನ ಕೊಟ್ಟರೆ, ಖಂಡಿತಾ ಗೆಲ್ಲುವೆನೆಂಬ ನಂಬುಗೆಯಿದೆ. ನಿಮ್ಮ ಹೆಸರೇನು? ಏನು ಕೆಲಸದ ಮೇಲೆ ಹೊರಟಿರಿ?” ಎಂದು ಕೇಳಿದನು.

ಅದಕ್ಕೆ ಎರಡನೆಯವನು ಹೀಗೆಂದನು: “ನನ್ನ ಹೆಸರು ಯಶೋವಂತನೆಂದು, ನನ್ನ ತಂದೆಯ ಹೆಸರು ಕೀರ್ತಿವಂತ. ಅವರು ದೊಡ್ಡ ದಾನಗುಣದವರು. ಅವರು ಮಾಡಿದ ದಾನಗಳಿಂದಾಗಿ ನನ್ನ ತಲೆ ಮೇಲೆ ಏಳುವಾಗ ಏನೂ ಉಳಿಯದೆ ಎಲ್ಲಾ ಮುಗಿದು ಹೋಯಿತು. ಆದರೂ ನನಗೇನೂ ಚಿಂತೆಯಿಲ್ಲಾ ಅನ್ನಿ. ಏಕೆಂದರೆ ನನ್ನ ತಂದೆ ಮಾಡಿದ ಕಾರ್ಯಗಳಿಂದ ಆಶ್ರಯವಿಲ್ಲದ ಎಷ್ಟೋ ಕುಟುಂಬಗಳು ರಕ್ಷಿಸಲ್ಪಟ್ಟವೆ ಆದುದರಿಂದ ನನಗೆ ಚಿಕ್ಕಂದಿನಿಂದಲೂ ಹಂಸಗಳಿಗಿಂತ, ಜಿಂಕೆಗಳಿಗಿಂತ, ಸರೋವರಗಳಿಗಿಂತ, ಪದಗಳಿಗಿಂತ, ಮೇಘಗಳ

ಮೇಲೆಯೇ ಬಹಳ ಇಷ್ಟ ಏಕೆನ್ನುವಿರಾ? ಮೇಘವು ತುಂಬಾ ಕಷ್ಟಪಟ್ಟು ಸಮುದ್ರದೊಳಗಿನ ಒಳ್ಳೆಯ ನೀರನ್ನು ಎತ್ತಿ ಸಂಗ್ರಹಿಸಿಕೊಳ್ಳುತ್ತದೆ. ಆದರೆ ಒಂದು. ಚುಕ್ಕೆ ಕೂಡಾ ತನ್ನಲ್ಲಿ ಉಳಿಸಿಕೊಳ್ಳದೆ, ಪೂರ್ತಿಯಾಗಿ ಪ್ರಕೃತಿಯಲ್ಲಿ ಬೇಕಾದವರಿಗೆಲ್ಲಾ ಹಂಚಿಕೊಟ್ಟುಬಿಡುತ್ತದೆ. ಆದುದರಿಂದ ಮೇಘಗಳದೇ ಒಂದು ಚಿತ್ರ ಬರೆದಿದ್ದೇನೆ. ನೋಡಿರಿ!” ಎಂದು ಹೇಳಿ ತಾನು ತಯಾರಿಸಿದ ಚಿತ್ರವನ್ನು ತೋರಿಸಿದನು.

ಆ ಚಿತ್ರವು ಅತ್ಯಂತ ಸುಂದರವಾಗಿದ್ದಿತು. ಆ ಚಿತ್ರದ ಕೆಳಗೆ ಒಂದು ಶ್ಲೋಕ ಕೂಡಾ ಹೀಗೆ ಬರೆಯಲಾಗಿತ್ತು:

“ಅಶ್ವಾಶ್ಯ ಪರ್ಯತಕುಲಂ ತಪನೋಷ್ಣ ತಪ್ತ ಮುದ್ದಾಮ ದಾನ ವಿಧುರಾಣಿ ಚ ಕಾನನಾನಿ।

ನಾನಾ ನದೀ ನದಶಲಾನಿ ಚ ಪೂರಯಿತ್ಯಾ ರಿತ್ತೋಸಿ ಯಜ್ಜಲದ ನೈವ ತವೋತ್ತಮಶ್ರೀ”

‘ಓ ಮೇಘವೇ! ಬಿಸಿಲಿನಿಂದ ಒಣಗಿ ಹೋಗುವ ಬೆಟ್ಟಗಳನ್ನು ತಣಿಸುವೆ; ಸುಟ್ಟು ಹೋಗುವ ಕಾಡುಗಳನ್ನು ಕಾಪಾಡುವೆ; ಎಷ್ಟೋ ನದಿಗಳನ್ನು ತುಂಬಿಸುವೆ. ಇಷ್ಟೆಲ್ಲಾ ಒಳ್ಳೆಯ ಕೆಲಸಗಳನ್ನು ಮಾಡಿ ಪೂರ್ತಿ ಖಾಲಿಯಾಗುವೆ. ಆದರೂ ನೀನೇ ಮಹಾ ಸಂಪತ್ತುಗಳಿಗೆ ನಿಲಯನಾಗಿಯೂ ಇರುವೆ!’ ಎಂದು ಈ ಶ್ಲೋಕಕ್ಕೆ ಅರ್ಥ.

ಆ ಚಿತ್ರವನ್ನು ನೋಡುತ್ತಿದ್ದಂತೆ ಚಾರುಗುಪ್ತನಿಗೆ ಸಂತೋಷವೂ ದುಃಖವೂ ಒಟ್ಟಿಗೆ ಉಕ್ಕಿಕೊಂಡುವು. ಅಷ್ಟು ಒಳ್ಳೆಯ ಚಿತ್ರವನ್ನು ಬರೆದ ಯಶೋವಂತನನ್ನು ತುಂಬಾ ಅಭಿನಂದಿಸಿದನು.

ಆದರೆ ಚಾರುಗುಪ್ತನ ಮಗಳಿಗೆ ಮದುವೆಯ ವಯಸ್ಸು ಬಂದಿತ್ತು. ಚಾರುಗುಪ್ತನು ತುಂಬಾ ಹಣದ ಮುಗ್ಗಟ್ಟಿನಲ್ಲಿದ್ದನು. ತನ್ನ ಚಿತ್ರಗಳಿಗೆ ಪ್ರಭುಗಳು ಬಹುಮಾನ ಕೊಟ್ಟರೆ ಆದರಿಂದ ಮಗಳ ಮದುವೆಯನ್ನು ಮಾಡಬಹುದೆಂದು ಚಾರುಗುಪ್ತನು ಅಂದುಕೊಂಡಿದ್ದನು.

ಆದರೆ ಯಶೋವಂತನ ಮೇಘದ ಚಿತ್ರವನ್ನು ನೋಡಿದ ಮೇಲೆ, ಇನ್ನು ತನಗೆ ಬಹುಮಾನ ಬರುವುದಿಲ್ಲವೆಂದೂ, ತನ್ನ ಕಷ್ಟಕ್ಕೆ ಸಂಹಾರಸಿಗದೆಂದೂ ಬಹಳವಾಗಿ ಸಂಕಟಪಟ್ಟನು.

ಈ ವಿಷಯವನ್ನು ಮರೆಮಾಚದೆ ಯಶೋವಂತನೊಂದಿಗೆ ಹೇಳಿ, “ಆದರೂ ನನಗೆ ಸಂತೋಷವೇ. ನನಗೆ ದೇವರು ಏನಾದರೂ ದಾರಿ ತೋರಿಸದಿರಲಾರನು!” ಎಂದನು.

ಆಮೇಲೆ ಇಬ್ಬರೂ ಮಲಗಿದರು.

ಬೆಳಗ್ಗೆ ಏಳುವಾಗ ಛತ್ರದಲ್ಲಿ ಎಲ್ಲಿಯೂ ಯಶೋವಂತನು ಕಾಣಲಿಲ್ಲ. ಆದರೆ ಅವನು ಬರೆದ ಮೇಘದ ಚಿತ್ರ ಮಾತ್ರ ಅಲ್ಲೇ ಇದ್ದಿತು.

ಚಾರುಗುಪ್ತನು ಆಶ್ಚರ್ಯಪಡುತ್ತ, ಆ ಚಿತ್ರದ ಕಡೆಗೆ ನೋಡಿ ಇನ್ನಿಷ್ಟು ಬೆರಗಾದನು. ಚಿತ್ರದ ಕೆಳಗೆ ಆ ಚಿತ್ರ ಬರೆದವನ ಹೆಸರಿನ ಸ್ಥಳದಲ್ಲಿ ‘ಚಾರುಗುಪ್ತ’ ಎಂದು ಬರೆಯಲ್ಪಟ್ಟಿತ್ತು.

ಯಶೋವಂತನ ಉದ್ದೇಶವನ್ನು ಗ್ರಹಿಸಿ, ಚಾರುಗುಪ್ತನು ತನ್ನ ಚಿತ್ರಗಳೊಂದಿಗೆ ಆ ಚಿತ್ರವನ್ನೂ ತೆಗೆದುಕೊಂಡು ಧಾರಾನಗರಕ್ಕೆ ಹೋಗಿ ಪ್ರದರ್ಶನಕ್ಕಿಟ್ಟನು.

ಅಲ್ಲಿ ಉತ್ತಮ ಚಿತ್ರದ ಬಹುಮಾನವಾಗಿ ಯಶೋವಂತನ ಮೇಘಗಳ ಚಿತ್ರಕ್ಕೆ ಬಹುಮಾನ ಬಂದಿತು. ಭೋಜರಾಜನು ಚಾರುಗುಪ್ತನನ್ನು ಕರೆದು ಲಕ್ಷ ಚಿನ್ನದ ನಾಣ್ಯಗಳನ್ನು ಬಹುಮಾನವಾಗಿ ಕೊಟ್ಟನು.

ಆಗ ಚಾರುಗುಪ್ತನು ಕಣ್ಣೀರು ತುಂಬಿಕೊಂಡು ಭೋಜ ರಾಜನೊಂದಿಗೆ ಹೀಗೆಂದನು: “ಮಹಾಪ್ರಭೂ, ನನ್ನನ್ನು ಕ್ಷಮಿಸಿರಿ. ಈ ಮೇಘದ ಚಿತ್ರವನ್ನು ಯಶೋವಂತನೆಂಬ ಚಿತ್ರ ಕಾರನು ಬರೆದಿದ್ದಾನೆ. ಆತನ ತಂದೆ ದೊಡ್ಡ ದಾನ ಶೂರನಾಗಿದ್ದು, ಆ ರಕ್ತವೇ

ಯಶೋವಂತನಲ್ಲಿ ಕೂಡಾ ಪ್ರವಹಿಸಿಕೊಂಡಿದೆ ಎಂಬುದನ್ನು ಅವನು ಮಾಡಿದ ಈ ಕಾರ್ಯದಿಂದ ನಿರೂಪಣವಾಗುತ್ತದೆ. ತಾನು ಬಡತನದ ಕಷ್ಟದಲ್ಲಿದ್ದು ಕೂಡಾ ನನ್ನ ಕಷ್ಟಗಳನ್ನು ಕೇಳಿ, ಮನಸ್ಸು ಕರಗಿ ಈ ಚಿತ್ರವನ್ನು ನನ್ನ ಹೆಸರಿನಲ್ಲಿ ಪ್ರಕಟಿಸಿ, ನನ್ನ ಹತ್ತಿರ ಹೇಳದೆಯೇ ಹೊರಟು ಹೋಗಿದ್ದಾನೆ. ಆತನ ಉದಾರ ಚರಿತ್ರೆಗೆ ಈ ಮೇಘವೇ ಒಂದು ಸಂಕೇತ.

ನನ್ನ ಕಷ್ಟಗಳು ಹೇಗೇ ಇದ್ದರೂ ಅಂತಹ ಉತ್ತಮನಿಗೆ ಸೇರಬೇಕಾದ ಬಹುಮಾನವನ್ನು ನಾನು ತೆಗೆದು ಕೊಂಡರೆ ಮಾನವತೆಗೆ ದ್ರೋಹಮಾಡಿದಂತಾಗುತ್ತದೆ. ಆದುದರಿಂದ ಮಹಾದಾತಾ ಕೀರ್ತಿಮಂತರ ಕುಮಾರನಾದ ಯಶೋವಂತನು ಎಲ್ಲಿದ್ದಾನೆಂದು ಹುಡುಕಿ ಕರೆಯಿಸಿ ಈ ಬಹುಮಾನವನ್ನು ಆತನಿಗೇ ಕಳುಹಿಸಿ ಕೊಡಿರಿ. ಅಷ್ಟು ಒಳ್ಳೆಯವನೊಂದಿಗೆ ಸ್ನೇಹವಾದುದೂ, ತಮ್ಮ ದರ್ಶನ ಭಾಗ್ಯ ನನಗೆ ಲಭಿಸಿದರೂ ಇವೆರಡು ಅದೃಷ್ಟಗಳೇ ನನಗೆ ಸಾಕು. ಬಹುಮಾನ ಲಭಿಸದಿದ್ದರೂ ಸಂತೋಷವಾಗಿಯೇ ಹೊರಟು ಹೋಗುತ್ತೇನೆ!” ಎಂದು ಚಾರುಗುಪ್ತನು ಛತ್ರದಲ್ಲಿ ತನಗೂ ಯಶೋವಂತನಿಗೂ ನಡೆದ ಸಂಭಾಷಣೆಯನ್ನೆಲ್ಲಾ ವಿವರವಾಗಿ ಹೇಳಿದನು.

ಅದನ್ನು ಕೇಳಿ ಸಭೆಯಲ್ಲಿರುವವರೆಲ್ಲಾ ಆಶ್ಚರ್ಯಪಟ್ಟರು.

ಭೋಜರಾಜನ ಕಣ್ಣುಗಳೂ ದಯಾದ್ರ್ರವಾದವು. ಕೂಡಲೇ ಭಟರನ್ನು ಕಳುಹಿಸಿ ಯಶೋವಂತನನ್ನು ಕರೆಯಿಸಿ, ತುಂಬಿದ ಸಭೆಯಲ್ಲಿ ಅವನಿಗೆ ಲಕ್ಷ ಚಿನ್ನದ ನಾಣ್ಯಗಳನ್ನು ಕೊಟ್ಟು ಸನ್ಮಾನ ಮಾಡಿದನು.

ನಿಜ ಹೇಳಿದ ಚಾರುಗುಪ್ತನ ಒಳ್ಳೆಯತನಕ್ಕೆ ಕೂಡಾ ಸಂತೋಷಪಟ್ಟು, ಭೋಜರಾಜನು ಸ್ವತಃ ಚಾರುಗುಪ್ತನ ಕುಮಾರಿಯ ವಿವಾಹವನ್ನು ವೈಭವೋಪೇತವಾಗಿ ನಡೆಯಿಸಿದನು. ಭೋಜಮಹಾರಾಜನು ಚಿತ್ರಸ್ಪರ್ಧೆಯಲ್ಲಿ ಬೇರೆ ಅನೇಕ ಚಿತ್ರಕಾರರ ಚಿತ್ರಗಳನ್ನೂ ಬೆಲೆಕಟ್ಟಿ ಕೊಂಡನು.

ನೀತಿ: ನೀತಿ, ನಿಯಮ, ದಾನ, ನಿಯತ್ತುಗಳನ್ನು ಪಾಲಿಸುವವರನ್ನು ದೇವರು ಎಂದೂ ಕೈ ಬಿಡುವುದಿಲ್ಲ.

Leave a Reply

Your email address will not be published. Required fields are marked *