Breaking News

ಪ್ರಜೆಗಳಿಗಾಗಿ ಬದುಕುವವನೇ ಉತ್ತಮ ಅರಸ | ನೀತಿ ಕಥೆಗಳು [Kannada Moral Stories 8]

ಪ್ರಜೆಗಳಿಗಾಗಿ ಬದುಕುವವನೇ ಉತ್ತಮ ಅರಸ | ನೀತಿ ಕಥೆಗಳು [Kannada Moral Stories 8]

ಶಹಜಹಾನ್ ಚಕ್ರವರ್ತಿಗೆ ನಾಲ್ವರು ಮಕ್ಕಳು. ಜೇಷ್ಠ ಪುತ್ರನಾದ ದಾರಾಷುವು ಪರಮಸಾತ್ವಿಕನಾಗಿದ್ದನು. ಸತ್ಯಾನ್ವೇಷಕನಾಗಿದ್ದನು. ಅವನು ವೇದ, ಉಪನಿಷತ್ತುಗಳನ್ನು ಆಸಕ್ತಿಯಿಂದ ಕಲಿತಿದ್ದನು. ಅವುಗಳಲ್ಲಿ ಕೆಲವನ್ನು ಅರಾಬಿಕ್ ಭಾಷೆಗೆ ತರ್ಜುಮೆ ಕೂಡಾ ಮಾಡಿದ್ದನು. ದಾರಾಷು ಆಗಾಗ್ಗೆ ಪಂಡಿತರುಗಳೊಡನೆ ತಾತ್ವಿಕ ವಿಷಯಗಳನ್ನು ಚರ್ಚಿಸುತ್ತಿದ್ದನು. ವಿನೋದಗಳ ಮೇಲಾಗಲೀ, ರಾಜಕೀಯದಲ್ಲಾಗಲೀ ಕೊಂಚವೂ ಆಸಕ್ತಿ ತೋರುತ್ತಿರಲಿಲ್ಲ.

ಅವನು ಧೈರ್ಯಶಾಲಿಯೂ, ಶೂರನೂ ಆಗಿದ್ದರೂ ಹೋರಾಡಿ ಗಳಿಸುವ ಜಯವನ್ನು ದೊಡ್ಡದಾಗಿ ಭಾವಿಸುತ್ತಿರಲಿಲ್ಲ. ಗೌರವ ಮರ್ಯಾದೆಗಳಿಂದ ಮತ್ತೊಬ್ಬರ ಮನ್ನಣೆಯನ್ನು ಪಡೆದಿದ್ದನು. ಅವಶ್ಯಕತೆ ಇದ್ದವರಿಗೆ ಉದಾರವಾಗಿ ಸಹಾಯ ಮಾಡುತ್ತಿದ್ದನು.ಅವನು ವೇದ, ವೇದಾಂಗಗಳ ಮೇಲೆ ಆಸಕ್ತಿಯನ್ನು ತೋರುತ್ತಾ, ಯಾವಾಗಲೂ ಪಂಡಿತರುಗಳೊಡನೆ ಚರ್ಚಿಸುವುದನ್ನ ಮತಾಂಧ ಧರ್ಮಗುರುಗಳು ಸಹಿಸಲಿಲ್ಲ.

ಆದರೆ ಶಹಜಹಾನನಿಗೆ ತನ್ನ ಕುಮಾರನೆಂದರೆ ಅತ್ಯಂತ ಪ್ರೀತಿಯೂ, ಮಮಕಾರವೂ ಇದ್ದುದರಿಂದ ಅವರು ಏನೂ ಮಾಡಲಾಗದವರಾಗಿದ್ದರು.

ಬುದ್ದಿವಂತರಾದ ಆಸ್ಥಾನದ ಉದ್ಯೋಗಿಗಳು ದಾರಾಷುವಿನಲ್ಲಿ ಅವನ ತಾತ ಅಕ್ಟರ್ ಚಕ್ರವರ್ತಿಯ ಲಕ್ಷಣಗಳಿರುವುದನ್ನು ನೋಡಿ ಸಂತೋಷಪಡುತ್ತಿದ್ದರು.

ಆದರೆ ಮತಾಂಧರುಗಳಾದ ಆಸ್ಥಾನ ಉದ್ಯೋಗಿಗಳು, ಧರ್ಮ ಗುರುಗಳು ಮಾತ್ರ, ಅಣ್ಣ ದಾರಾಷುವಿನ ಮೇಲೆ ಉಳಿದ ಮೂವರು ರಾಜಕುಮಾರರುಗಳಿಗೂ ದ್ವೇಷ ಉಂಟು ಮಾಡಲು ಯತ್ನಿಸಿದರು.

ತಾನು ಬಯಸಿದುದನ್ನು ಸಾಧಿಸಿಕೊಳ್ಳುವುದಕ್ಕಾಗಿ ಎಂತಹ ಕ್ರೂರ ಕೃತ್ಯಗಳನ್ನು ಮಾಡಲೂ ಹಿಂಜರಿಯದ ಶಹಜಹಾನನ ಮೂರನೆಯ ಮಗನಾದ ಔರಂಗಜೇಬನು ಆ ಪರಿಸ್ಥಿತಿಯನ್ನು ತನಗೆ ಅನುಕೂಲವಾಗಿ ಪರಿವರ್ತಿಸಿಕೊಳ್ಳಲು ತಯಾರಾದನು.

ಶಹಜಹಾನನು ಅಸ್ವಸ್ಥನಾದನು. ಅವನ ನಂತರ ದಾರಾಷುವಿಗೆ ರಾಜ್ಯಸಿಂಹಾಸನದ ಉತ್ತರಾಧಿಕಾರವಿರುವ ಅವಕಾಶವಿದೆ ಎಂದು ತಿಳಿದೊಡನೆಯೇ, ತಮ್ಮ ಮುರಾದ್‌ನ ಸಹಾಯದಿಂದ ಔರಂಗಜೇಬನು ಸಿಂಹಾಸನವನ್ನು ಆಕ್ರಮಿಸಿಕೊಳ್ಳಲು ಸೇನೆಯೊಡನೆ ರಾಜಧಾನಿಯ ಕಡೆಗೆ ಹೊರಟನು.

ತನ್ನ ತಂದೆಯ ಸಹಾಯದೊಡನೆ ದಾರಾಷುವು ಅವನನ್ನು ಎದುರಿಸಿದರೂ ಯುದ್ಧದಲ್ಲಿ ಮೂರು ಸಲ ಸೋತು ಹೋದನು. ಔರಂಗಜೇಬನು ತನ್ನ ತಂದೆಯನ್ನು ಸೆರೆಯಲ್ಲಿಟ್ಟು ತಾನೇ ಚಕ್ರವರ್ತಿ ಎಂಬುದಾಗಿ ಪ್ರಕಟಿಸಿಕೊಂಡನು.

ಸಿಂಹಾಸನವನ್ನು ಆಕ್ರಮಿಸಿಕೊಳ್ಳಲು ಯತ್ನಿಸಿದ ಅವನ ಎರಡನೆಯ ಸಹೋದರ ಶೂಜಾವು ಸಹಾ ತಪ್ಪಿಸಿಕೊಂಡು ಓಡಿ ಹೋಗುವಾಗ ಅರಕಾನ್‌ನಲ್ಲಿ ಸತ್ತು ಹೋದನು.

ಅರ್ಧ ರಾಜ್ಯವನ್ನು ಕೊಡುವುದಾಗಿ ಹೇಳಿದ ಔರಂಗಜೇಬನ ಮಾತನ್ನು ಮರುಳಾಗಿ ನಂಬಿ ಸೆರೆಮನೆಯ ಪಾಲಾದ ಮುರಾನು ಶಿರಚ್ಛೇದನ ಶಿಕ್ಷೆಗೆ ಗುರಿಯಾದನು.

ರಾಜಧಾನಿಯಿಂದ ಪತ್ನಿಯೊಡನೆ ತಪ್ಪಿಸಿಕೊಂಡ ದಾರಾಷುವು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಹೋಗುತ್ತಾ ಇದ್ದಾಗ ಒಂದು ಕಡೆ ತನ್ನ ಪತ್ನಿಯನ್ನು ಕಳೆದುಕೊಂಡನು. ಅವನು ಕೊನೆಗೆ ಆಫ್ಘನ್ನಿನ ಸಾಮಂತ ಜಿವಾನ್‌ ಖಾನನ ಆಶ್ರಯವನ್ನು ಸೇರಿದನು.

ಅದಕ್ಕಿಂತ ಮೊದಲು ಒಂದು ಸಲ, ಶಹಜಹಾನ್ನನು ಜಿವಾನ್‌ ಖಾನ್‌ನನ್ನು ಆನೆಯಿಂದ ತುಳಿಸಿ ಕೊಲ್ಲಿಸುವಂತೆ ಆಜ್ಞಾಪಿಸಿದ್ದನು. ಆ ಸಂದರ್ಭದಲ್ಲಿ ದಾರಾಷುವು ತಂದೆಯನ್ನು ಸಮಾಧಾನ ಪಡಿಸಿ ಜಿವಾನ್‌ಖಾನ್‌ನನ್ನು ಕಾಪಾಡಿದ್ದನು.

ಆದರೆ, ಕೃತಘ್ನನಾದ ಜಿವಾನ್‌ಖಾನ್‌ನು ಆಶ್ರಯ ಪಡೆದಿದ್ದ ದಾರಾಷುವನ್ನು ಔರಂಗಜೇಬನಿಗೆ ಒಪ್ಪಿಸಿ ಬಿಟ್ಟನು.

ದಾರಾಷುವನ್ನು ಬಂಧಿಯಾಗಿ ಆಗ್ರಾಕ್ಕೆ ಕರೆದೊಯ್ಯಲಾಯಿತು. ಸಿಂಹಾಸನಕ್ಕೆ ನ್ಯಾಯಸಮ್ಮತವಾದ ವಾರಸುದಾರನಾದ ದಾರಾಷವನ್ನು ನಡೆಯಲಾಗದ ಒಂದು ಮುದಿ ಆನೆಯ ಮೇಲೆ ಕೂರಿಸಿ ಆಗ್ರಾ ನಗರದ ಬೀದಿಗಳಲ್ಲಿ ಸುತ್ತಿಸಿದರು. ಆ ದೃಶ್ಯವನ್ನು ನೋಡಿದ ಸಹಸ್ರಾರು ಜನರು ಅವನ ದುರದೃಷ್ಟಕ್ಕೆ ಮರುಗಿದರು.

“ಯುವರಾಜಾ ತಾವು ನನಗೆಷ್ಟು ಸಲ ದಾನಧರ್ಮಗಳನ್ನು ಮಾಡಿದ್ದೀರಿ? ಈಗ ನನಗೆ ಕೊಡಲು ನಿಮ್ಮ ಬಳಿ ಏನೂ ಇಲ್ಲವಲ್ಲ!” ಎಂದು ಆ ಜನರ ಮಧ್ಯ ಇದ್ದ ಒಬ್ಬ ಫಕೀರನು ವ್ಯಥೆಯಿಂದ ಗೋಳಾಡಿದನು.
ದಾರಾಷನ ಬಳಿ ಹರಿದು ಹೋಗಿದ್ದ. ಧರಿಸಿಕೊಂಡಿದ್ದ ಬಟ್ಟೆಗಳಲ್ಲದೆ ಬೇರೇನೂ ಇರಲಿಲ್ಲ. ಅವನು ಫಕೀರನಿಗೆ ವಂದಿಸುತ್ತಾ ತನ್ನ ಮೈಮೇಲಿದ್ದ ಶಾಲನ್ನು ತೆಗೆದು ಅವನ ಮೇಲೆಸೆದನು. ಅದನ್ನು ನೋಡಿದ ಜನರು ಯುವರಾಜನ ದಾನಗುಣವನ್ನು ಮನಸಾರ ಪ್ರಶಂಸಿಸುತ್ತಾ ಕಣ್ಣೀರು ಸುರಿಸಿದರು.

ಅವರು ತಮ್ಮ ಪ್ರೀತಿಪಾತ್ರನಾದ ಯುವರಾಜನನ್ನು ನೋಡಿದುದು ಅದೇ ಕಡೆಯ ಸಲವಾಯಿತು. ಔರಂಗಜೇಬನು ತನಗೆ ಬೇಕಾದವರ ಕೈಯಲ್ಲಿ ನ್ಯಾಯ ವಿಚಾರಣೆ ನಡೆಸಿ ದಾರಾಷವಿಗೆ ಮರಣ ಶಿಕ್ಷೆಯನ್ನು ವಿಧಿಸುವಂತೆ ಮಾಡಿದನು.

ನೀತಿ: ಉತ್ತಮರಾದ ಪ್ರಭುಗಳು ತಮ್ಮ ಪ್ರಜೆಗಳನ್ನು ದೊಡ್ಡ ಗುಣದಿಂದ ನೋಡುತ್ತಾರೆ.

Leave a Reply

Your email address will not be published. Required fields are marked *