Breaking News

ಕೊಟ್ಟು ಕೊಳ್ಳುವ ಭಾವನೆಯೇ ಸಂಸಾರ | ನೀತಿ ಕಥೆಗಳು 5

ಕೊಟ್ಟು ಕೊಳ್ಳುವ ಭಾವನೆಯೇ ಸಂಸಾರ | ನೀತಿ ಕಥೆಗಳು 5 [Kannada Moral Stories 5]

ಒಂದು ದೇಶದ ಮಹಾರಾಜನು ತನ್ನ ಸೇನೆಯಲ್ಲಿರುವ ವಿಶ್ವಜಿತ್ತು ಎಂಬ ಮಹಾವೀರನನ್ನು ತುಂಬಾ ಮೆಚ್ಚಿದನು. ಅವನನ್ನು ಸರ್ವಸೇನಾನಿಯಾಗಿ ಮಾಡಬೇಕೆಂದು ರಾಜನಿಗೆ ತೋರಿತು. ಆದರೆ ಅನೇಕ ವರ್ಷಗಳಿಂದ ಸರ್ವಸೇನಾನಿಯಾಗಿದ್ದ ಧೀರವರ್ಮನನ್ನು ಹೇಗೆ ಆ ಪದವಿಯಿಂದ ತಪ್ಪಿಸುವುದೆಂದು ತಿಳಿಯದೆ ಮಂತ್ರಿಯೊಂದಿಗೆ ಆಲೋಚಿಸಿದನು.

“ಪ್ರಭೂ, ಧೀರವರ್ಮನು ಸ್ವಯಂವ್ಯಕ್ತಿತ್ವದಲ್ಲಿ ಮಹಾವೀರನಲ್ಲದೆ ಇರಬಹುದು. ಆದರೆ ವೀರವಾಹಿನಿಯನ್ನು ನಡೆಸಿಕೊಂಡು ಹೋಗುವ ಶಕ್ತಿ ಅವನಲ್ಲಿದೆ. ಇಷ್ಟು ವರ್ಷಗಳಿಂದ ನಮಗೆ ಶತ್ರು ಭಯವಿಲ್ಲವೆಂದರೆ, ಅದಕ್ಕೆ ಅವನನ್ನು ಕೂಡಾ ಅಭಿನಂದಿಸಬೇಕು. ವಿಶ್ವಜಿತ್ತು ದೊಡ್ಡ ವೀರನಾಗಿರಬಹುದಾದರೂ ಸರ್ವಸೇನೆಗಳನ್ನೂ ನಡೆಯಿಸಬಲ್ಲ ಪ್ರಜ್ಞೆ ಅವನಿಗಿದೆ ಎಂದು ನಮಗೆ ತಿಳಿದಿಲ್ಲವಷ್ಟೆ?” ಎಂದನು ಮಂತ್ರಿ

ರಾಜನು ವಿಶ್ವಜಿತ್ತುವನ್ನು ತನ್ನ ಬಳಿಗೆ ಬರಮಾಡಿಸಿ. “ನಿನಗೆ ಸರ್ವಸೇನಾನಿ ಪದವಿ ಬೇಕೆಂದಿದ್ದರೆ ಕೊಡುತ್ತೇನೆ. ಆದರೆ ಧೀರವರ್ಮನು ನಿನಗೆ ಅಡ್ಡಬಾರದ ಹಾಗೆ ನೀನೇ ನೋಡಿಕೊಳ್ಳಬೇಕು. ಅವನನ್ನು ಕೊಲ್ಲಲೂಬಾರದು. ಮೋಸದಿಂದ ತೊಲಗಿಸಲೂ ಕೂಡದು!” ಎಂದನು.

“ಪ್ರಭು, ಅವನನ್ನು ಕೊಲ್ಲಬಾರದೆನ್ನುವಿರಿ. ಮೋಸದಿಂದ ಹೊಡೆಯಕೂಡದೆನ್ನುವಿರಿ. ವೀರನಾದವನಿಗೆ ಶತ್ರುಗಳೊಂದಿಗೆ ಸೆಣಸುವಾಗ ಆ ಎರಡು ಅಪಾಯಗಳೂ ಇದ್ದೇ ಇರುತ್ತವೆ. ಅವುಗಳನ್ನು ಎದುರಿಸಬೇಕಾದುದೇ ಅವನ ಕೆಲಸ. ಆದುದರಿಂದ ಧೀರವರ್ಮನ ಮೇಲೆ ತಂತ್ರ ಮೋಸಗಳನ್ನು ಪ್ರಯೋಗಿಸುವಂಥ ಅವಕಾಶವನ್ನು ನನಗೆ ಕೊಡಬೇಕು!” ಎಂದನು ವಿಶ್ವಜಿತ್ತು.

“ಸರಿ. ಹಾಗೇ ಆಗಲಿ!” ಎಂದನು ರಾಜ.

ವಿಶ್ವಜಿತ್ತುವಿಗೆ ಹೆಂಡತಿ ಸುಮತಿಯ ಮೇಲೆ ಬಲು ಪ್ರೀತಿ. ಅವಳೊಂದಿಗೆ ತನ್ನ ಸಂತೋಷವನ್ನು ಮುಚ್ಚಿಡಲಾಗದೆ. ಎಲ್ಲಾ ಸಂಗತಿಯನ್ನೂ ಹೇಳಿದನು.

ಅದನ್ನು ಕೇಳಿ ಅವಳು ಸಂತೋಷಿಸುವುದಕ್ಕೆ ಬದಲಾಗಿ, “ಧೀರವರ್ಮರು ನಮ್ಮ ದೇಶವನ್ನೇ ಕಾಪಾಡುವಂಥವರು. ಮಹಾರಾಜರಿಗೆ ಅವರಿಗಿಂತ ಹೆಚ್ಚಿನ ಲಾಭ ನಿಮ್ಮಿಂದ ಆದೀತೇ?” ಎಂದಳು.

ವಿಶ್ವಜಿತ್ತುವಿಗೆ ಹೆಂಡತಿಯ ಮಾತು ಕೇಳಿ ಬಹಳ ಕೋಪ ಬಂದಿತು. “ರಾಜನಿಗೆ ನಾನು ಯುದ್ಧದಲ್ಲಿ ಇನ್ನೂ ಅನೇಕ ರಾಜ್ಯಗಳನ್ನು ಜಯಿಸಿಕೊಡುತ್ತೇನೆ. ನೀನು ಗಂಡನ ಉನ್ನತಿಯನ್ನು ನೋಡಿ ಸಂತೋಷಪಡುವವಳಲ್ಲವೆಂದು ಈಗ ಗೊತ್ತಾಯಿತು. ನೀನು ನಿನ್ನ ತೌರಿಗೆ ಹೋಗಿಬಿಡು. ನಡೆ!” ಎಂದನು.

ಸುಮತಿ ಸರಿಯೆಂದು ಹೇಳಿ, ತನ್ನ ಗಂಟುಮೂಟೆ ಸಿದ್ಧಪಡಿಸಿ ಹೊರಡಲು ತಯಾರಾದಳು. ಹೋಗುವಾಗ ಮೊದಲು ಗುಟ್ಟಾಗಿ ಧೀರವರ್ಮನ ಬಳಿಗೆ ಹೋಗಿ, ತಾನು ತೌರು ಮನೆಗೆ ಹೊರಡಬೇಕಾಗಿ ಬಂದ ಕಾರಣವನ್ನು ತಿಳಿಯಪಡಿಸಿ, “ನನ್ನಿಂದ ನಿಮಗೆ ಈಗ ರಹಸ್ಯ ಸಮಾಚಾರವು ಗೊತ್ತಾಗಿದೆ. ಆದ್ದರಿಂದ ಯಾವ ಪರಿಸ್ಥಿತಿಯಲ್ಲಿಯೂ ನೀವು ನನ್ನ ಗಂಡನನ್ನು ಕೊಲ್ಲಬಾರದು!” ಎಂದು ಹೇಳಿ ಮಾತು ಪಡೆದು ಕೊಂಡಳು.

ಮರುದಿನ ಧೀರವರ್ಮನು ಒಬ್ಬ ಸಾಧುವಿನ ವೇಷ ಧರಿಸಿಕೊಂಡು ರಾಜನನ್ನು ದರ್ಶನ ಮಾಡಿದನು. ತಾನು ಹಿಮಾಲಯದಿಂದ ತಿರುಗಿ ಬರುವುದಾಗಿ ರಾಜನಿಗೆ ಹೇಳಿ. ರಾಜನಿಂದ ಸತ್ಕಾರ ಪಡೆದು ಹೀಗೆಂದನು:

“ರಾಜ, ನೀವು ಸರ್ವಸೇನಾನಿಯ ಪದವಿಯನ್ನು ಮಾರ್ಪಡಿಸಲು ನೋಡುವಿರಿ. ವಿಶ್ವಜಿತ್ತು ಎಂಬವನು ಮಹಾವೀರನಿರಬಹುದು. ಆದರೆ ಅವನ ಗ್ರಹಗಳ ಸ್ಥಾನ ಚೆನ್ನಾಗಿಲ್ಲ. ನೀವು ಅವನಿಗೆ ಸರ್ವಸೇನಾನಿ. ಪದವಿ ಕೊಡುವೆನೆಂದುದೇ ತಡ, ಅವನ ಮನೆಯಿಂದ ಲಕ್ಷ್ಮೀದೇವಿಯಂತಹ ಅವನ ಹೆಂಡತಿ ತಕರಾರು ಮಾಡಿ ಹೊರಟುಹೋದಳು. ಅವನು ಈ ರಾಜ್ಯಕ್ಕೆ ಸರ್ವಸೇನಾನಿಯಾದ ಮರುದಿನ, ಈ ದೇಶವನ್ನು ಅಂಟಿ ಹಿಡಿದುಕೊಂಡಿದ್ದ ಸುಖಶಾಂತಿಗಳು ಮಣ್ಣುಗೂಡುತ್ತವೆಂದು ಎಚ್ಚರಿಸಲೇ ಬಂದೆನು!”

ರಾಜನಿಗೆ ಆಶ್ಚರ್ಯ! ಸರ್ವಸೇನಾನಿ ಪದವಿಯನ್ನು ಬದಲಾಯಿಸಲಿರುವ ಸಂಗತಿ ವಿಶ್ವಜಿತ್ತುಗೂ ತನಗೂ ಮಾತ್ರವೇ ಗೊತ್ತು.

ಹಿಮಾಲಯದಿಂದ ಬಂದ ಸಾಧು ಎಲ್ಲವನ್ನೂ ವಿವರವಾಗಿ ಹೇಳಿದ್ದು ಕೇಳಿ ರಾಜನು ಚಾರರನ್ನು ಕರೆದು, ವಿಶ್ವಜಿತ್ತುನ ಹೆಂಡತಿ ಗಂಡನನ್ನು ಬಿಟ್ಟು ಹೋದುದು ನಿಜವೋ ಎಂದು ತಿಳಿದು ಬರುವಂತೆ ಕಳುಹಿಸಿದನು.

ಸ್ವಲ್ಪ ಹೊತ್ತಿಗೆ ಸಾಧು ಹೇಳಿದ್ದೆಲ್ಲವೂ ನಿಜವೇ ಎಂದು ಗೊತ್ತಾಯಿತು. ರಾಜನು ತಟ್ಟನೆ ಒರೆಯಿಂದ ಕತ್ತಿಸೆಳೆದು, “ಈ ಕತ್ತಿಯ ಮೇಲೆ ಆಣೆ! ಈ ದೇಶಕ್ಕೆ ಸರ್ವಸೇನಾನಿ ಧೀರವರ್ಮನೇ ಹೊರತು, ವಿಶ್ವಜಿತ್ತು ಅಲ್ಲ! ಹಾಗೆ ಮಾಡುವುದಿಲ್ಲ!” ಎಂದನು.

ಸಾಧುವೇಷದ ಧೀರವರ್ಮನು ಇನ್ನೂ ಕೆಲವು ಬೋಧನೆಗಳನ್ನು ಹೇಳಿದ ರಾಜನಿಂದ ಅಪ್ಪಣೆ ಪಡೆದು ಹೊರಟು ಹೋದನು.

ವಿಶ್ವಜಿತ್ತು ಆಮೇಲೆ ರಾಜನನ್ನು ನೋಡಿದಾಗ, ರಾಜನು, “ವಿಶ್ವಜಿತ್ತೂ, ನಾನೀಗ ನನ್ನ ಅಭಿಪ್ರಾಯ ಬದಲಾಯಿಸಿಕೊಂಡಿದ್ದೇನೆ. ಧೀರವರ್ಮನೇ ಸರ್ವ ಸೇನಾನಿಯಾಗಿರುತ್ತಾನೆ. ನೀನು ಅವನಿಗೇನಾದರೂ ಕೇಡು ಮಾಡಿದರೆ ನಿನ್ನ ತಲೆಯನ್ನು ತೆಗೆಸುತ್ತೇನೆ!” ಎಂದು ಎಚ್ಚರಿಸಿ ಅವನನ್ನು ಕಳುಹಿಸಿದನು.

ಅಷ್ಟು ಬೇಗನೆ ರಾಜನು ಏಕೆ ತನ್ನ ಅಭಿಪ್ರಾಯವನ್ನು ಬದಲಾಯಿಸಿಕೊಂಡನೆಂದು ವಿಶ್ವಜಿತ್ತುಗೆ ಗೊತ್ತಾಗಲಿಲ್ಲ. ಅವನು ತನ್ನ ಹೆಂಡತಿಯ ಅಳುಮೋರೆಯ ಲಕ್ಷಣದಿಂದಲೇ ಹೀಗಾಯಿತೆಂದುಕೊಂಡು ಇನ್ನೊಂದು ಮದುವೆ ಮಾಡಿಕೊಳ್ಳಲು ನಿಶ್ಚಯಿಸಿಕೊಂಡನು.

ಇದು ಸುಮತಿಗೆ ಗೊತ್ತಾದ ಕೂಡಲೇ ಗಂಡನ ಬಳಿಗೆ ಓಡಿ ಬಂದಳು. ಎಷ್ಟು ಮಾತ್ರಕ್ಕೂ ನಿನ್ನನ್ನು ಸ್ವೀಕರಿಸಲಾರೆನೆಂದು ವಿಶ್ವಜಿತ್ತು ಪಟ್ಟುಹಿಡಿದನು.

ಸುಮತಿ ನೇರಾಗಿ ಸರ್ವಸೇನಾನಿ ಧೀರವರ್ಮನ ಬಳಿಗೆ ಹೋದಳು.

ಅವಳು ಹೇಳಿದುದನ್ನು ಕೇಳಿ ಧೀರವರ್ಮನು, “ಹೌದಮ್ಮ, ನಿನ್ನ ಗಂಡನು ಸರ್ವ ಸೇನಾನಿಯಾಗುವುದಕ್ಕೆ ನೀನು ಅಡ್ಡನಿಂತೆ. ನಿನ್ನಿಂದಲೇ ನನ್ನ ಪದವಿ ನನಗೇ ಸ್ಥಿರವಾಯಿತು. ನೀನು ಹಾಗೇಕೆ ಮಾಡಬೇಕಿತ್ತು?” ಎಂದು ಕೇಳಿದನು.

ಸುಮತಿ ಮುಚ್ಚುಮರೆಯಿಲ್ಲದೆ, “ಅಯ್ಯಾ, ದೊಡ್ಡ ಪದವಿಯೊಂದಿಗೆ ಬಾಧ್ಯತೆಗಳೂ ಹೆಚ್ಚಾಗುತ್ತವೆ. ನನ್ನ ಗಂಡ ತಾನು ಸರ್ವಸೇನಾನಿಯಾದ ಕೂಡಲೇ ಯುದ್ಧಗಳನ್ನು ಮಾಡುತ್ತಾರಂತೆ. ಹಗಲೂ ರಾತ್ರಿಯೂ ಸರ್ವಸೇನಾನಿಯ ಬಾಧ್ಯತೆಯ ಕೆಲಸಗಳಿಂದ ಮನೆಗೆ ಬರಲಿಕ್ಕೆ ಅವರಿಗೆ ಹೊತ್ತೇ ಸಿಕ್ಕದು. ಇದೆಲ್ಲಾ ಅರ್ಥವಾಗಿ ನಮ್ಮ ಗಂಡ ಹೆಂಡತಿ ಅನ್ನೋನ್ಯತೆಗೆ ಧಕ್ಕೆ ಬರುತ್ತದೆಂದುಕೊಂಡೇ ಆ ಪದವಿ ಬೇಡವೆಂದೆನು. ಅದಕ್ಕೇ ನಿಮ್ಮ ಹತ್ತಿರ ಬಂದು ನಿಮ್ಮ ಜಾಗ್ರತೆ ನೀವು ನೋಡಿಕೊಳ್ಳುವಂತೆ ಹೇಳಿದೆನು!” ಎಂದು ಹೇಳಿದಳು.

ಅವಳು ಇದ್ದ ಮಾತನ್ನು ಹೇಳಿದುದನ್ನು ಕೇಳಿ ಧೀರವರ್ಮನು ಸಂತೋಷಪಟ್ಟು, “ಅಮ್ಮಾ. ಒಂದು ಕೆಲಸ ಮಾಡು. ನಿನ್ನ ಸಂಸಾರವು ಸರಿಯಾಗಲು ನಿನಗೆ ರಾಜನ ದರ್ಶನ ಮಾಡಿಸುತ್ತೇನೆ. ನೀನು ರಾಜನೊಡನೆ ಹೇಳಬೇಕಾದ್ದನ್ನು ಹೇಳುವೆಯಾ?” ಎಂದನು. ಸುಮತಿ ಹೇಳಬಲ್ಲೆನೆಂದು ತಲೆಯಾಡಿಸಿದಳು.

ಧೀರವರ್ಮನ ಪ್ರಯತ್ನದಿಂದ ಅವಳಿಗೆ ಸುಲಭವಾಗಿ ರಾಜನ ದರ್ಶನವಾಯಿತು.

ತನ್ನ ಗಂಡನಾದ ವಿಶ್ವಜಿತ್ತು, ತನಗೆ ಮಾಡುವ ಅನ್ಯಾಯವನ್ನು ಅವಳು ರಾಜನೊಂದಿಗೆ ಹೇಳುವುದಕ್ಕೆ ಬದಲಾಗಿ, ಸರ್ವಸೇನಾನಿಯ ವಿಷಯದಲ್ಲಿ ತನ್ನ ಪ್ರವರ್ತನೆಯನ್ನೆಲ್ಲಾ ರಾಜನೊಂದಿಗೆ ತಿಳಿಸಿ. ತನಗೆ ಏನಾದರೂ ಶಿಕ್ಷೆ ವಿಧಿಸಬೇಕೆಂದು ಕೇಳಿಕೊಂಡಳು.

ಅವಳು ಹೇಳಿದ ರೀತಿಯಿಂದ ಧೀರರ್ಮನೇ ಹಿಮಾಲಯದ ಸಾಧುವಿನ ವೇಷದಲ್ಲಿ ತನ್ನ ಬಳಿಗೆ ಬಂದಿರಬೇಕೆಂದು ರಾಜನಿಗೆ ಅನುಮಾನವಾಯಿತು.

“ನನ್ನನ್ನು ನೋಡಲಿಕ್ಕೆ ಬಂದ ನೀನು ನಿನ್ನ ಗಂಡನಿಂದ ನಿನಗಾಗುವ ಅನ್ಯಾಯವನ್ನು ಹೇಳುವುದನ್ನು ಬಿಟ್ಟು, ಎಲ್ಲವೂ ನಿನ್ನ ತಪ್ಪಿನ ಹಾಗೆ ಚಿತ್ರಿಸಿಕೊಂಡು ಏಕೆ ಹೇಳಿದೆ?” ಎಂದು ರಾಜನು ಕೇಳಿದನು.

“ಪ್ರಭುಗಳೇ, ಸಂಸಾರವೆಂದರೆ ಒಬ್ಬರು ಹೇಳಿ ನಡೆಯುವಂತಹುದಲ್ಲ. ಗಂಡ ಹೆಂಡಿರ ಮನಸ್ಸಿನಲ್ಲಿ ಕೊಟ್ಟು ಕೊಳ್ಳುವ ಭಾವನೆ ಇರಬೇಕು. ನನ್ನ ಗಂಡನು ತಪ್ಪು ಮಾಡಿದನೆಂದು ಹೇಳಿ ನನ್ನ ಸಂಸಾರವನ್ನು ಹೇಗೆ ಒಳಿತು ಮಾಡಿಕೊಂಡೇನು? ಆದ್ದರಿಂದ ನನ್ನ ತಪ್ಪುಗಳನ್ನೇ ಹೇಳಿಕೊಂಡೆನು. ನಿಜವಾಗಿಯೂ ನಿಮ್ಮಿಂದ ನಾನು ಶಿಕ್ಷೆ ಅನುಭವಿಸಿದರೆ ನನ್ನ ಗಂಡನು ಸಂತೋಷಪಟ್ಟು ಇನ್ನೊಬ್ಬಳನ್ನು ಮದುವೆಯಾಗುವ ಯೋಚನೆಯನ್ನು ಬಿಡಲೂಬಹುದು. ಇದೇ ನನ್ನ ತಾಪತ್ರಯ!” ಎಂದಳು ಸುಮತಿ.

ಸಂಸಾರವನ್ನು ಸರಿಪಡಿಸಿಕೊಳ್ಳಲಿಕ್ಕಾಗಿ ಅವಳು ಪಡುವ ತಾಪತ್ರಯವು ರಾಜನಿಗೆ ಅರ್ಥವಾಯಿತು. ಅದೇ ಸಮಯದಲ್ಲಿ ಸರ್ವಸೇನಾನಿ ಧೀರವರ್ಮನು ಮಾಡಿದ ಮೋಸವನ್ನು ಮರೆಯಲಾರದೆ ಹೋದನು.

ಸುಮತಿ ಅಲ್ಲಿ ಇರುವಾಗಲೇ ಧೀರವರ್ಮನನ್ನು ಕರೆಯಿಸಿ, “ಸಾಧುವಾಗಿ ಬಂದು ಏಕೆ ಮೋಸಮಾಡಿದೆ?” ಎಂದು ನೇರವಾಗಿ ಕೇಳಿದನು ರಾಜ.

“ಪ್ರಭು, ನನ್ನ ಮೋಸವನ್ನು ನಾನು ಅಡಗಿಸಿಕೊಳ್ಳಬೇಕೆಂದಿದ್ದೆನಾದರೆ ಸುಮತಿಯನ್ನು ನಿಮ್ಮ ಮುಂದೆ ಕಳುಹಿಸುತ್ತಿರಲಿಲ್ಲ. ಸುಮತಿ ನಿಮ್ಮ ಮುಂದೆ ಗಂಡನ ಮೇಲೆ ದೂರು ಹೇಳುವವಳಲ್ಲವೆಂದು ನನಗೆ ಗೊತ್ತಿದೆ. ಗಂಡನು ತನ್ನ ಬಳಿಯಲ್ಲಿರಬೇಕೆಂತಲೇ ಅವಳು ಸರ್ವಸೇನಾನಿಯಂತಹ ಪದವಿ ಗಂಡನಿಗೆ ಬೇಡವೇ ಬೇಡವೆಂದುಕೊಂಡವಳು.

ನನ್ನನ್ನು ಮೋಸಪಡಿಸಿ ನನ್ನ ಉದ್ಯೋಗವನ್ನು ವಿಶ್ವಜಿತ್ತು ಪಡೆದುಕೊಳ್ಳಲು ನೀವು ಅನುಮತಿ ಕೊಟ್ಟಿದ್ದೀರಿ. ಅಂತಹ ಮೋಸವನ್ನೇ ನಾನೂ ಮಾಡಿ ನನ್ನ ಉದ್ಯೋಗ ಜಾರಿ ಹೋಗದಂತೆ ಮಾಡಿಕೊಂಡದ್ದು ತಪ್ಪು ಎಂದಾದರೆ ನೀವು ನನ್ನನ್ನು ತಪ್ಪದೆ ಶಿಕ್ಷಿಸಿಬಿಡಿರಿ!” ಎಂದನು ಧೀರವರ್ಮ.

ರಾಜನಿಗೆ ಏನು ಹೇಳುವುದೆಂದು ತೋರಲಿಲ್ಲ. ದೇಶವು ಸುಭಿಕ್ಷವಾಗಿರುವಾಗ ಒಬ್ಬ ಮನುಷ್ಯನ ಮೇಲೆ ಅಭಿಮಾನ ಹುಟ್ಟಿದುದಕ್ಕಾಗಿ ಸೇನಾನಿಯನ್ನು ಮಾರ್ಪಡಿಸುವ ಕೆಲಸ ಮಾಡಿದ್ದು ತಪ್ಪೇ ಎಂದು ಎಲ್ಲರೂ ತನ್ನನ್ನು ನಿಂದಿಸುವಂತೆಯೇ ರಾಜನಿಗೆ ತೋರಿತು.

ಮುಖ್ಯವಾಗಿ ಈ ವಿಷಯದಲ್ಲಿ ಸುಮತಿಯ ಪ್ರವರ್ತನೆಯಿಂದಲೇ ತನ್ನ ತಪ್ಪು ಪ್ರವರ್ತನೆ ತಿಳಿಯುವಂತಾಯಿತು.

ರಾಜನು ಸುಮತಿಯ ಮೇಲೆ ಕೃತಜ್ಞತಾ ಭಾವವನ್ನು ತಂದುಕೊಂಡು ಅವಳಿಗೆ ವಜ್ರ ವೈಡೂರ್ಯಾದಿ ರತ್ನಗಳನ್ನು ಬಹುಮಾನವಾಗಿ ಕೊಟ್ಟನು. ಅಷ್ಟೇ ಅಲ್ಲದೆ ರಾಜನು ಒಬ್ಬ ಭಟನನ್ನು ಕರೆದು ವಿಶ್ವಜಿತ್ತು ಸುಮತಿಯನ್ನು ಸ್ವೀಕರಿಸಿಕೊಂಡು ಚೆನ್ನಾಗಿ ನಡೆಸಿಕೊಳ್ಳತಕ್ಕದ್ದೆಂಬ ತನ್ನ ಆಜ್ಞೆಯನ್ನೂ ಕಳುಹಿಸಿದನು.

ಕೆಲವು ತಲೆಮಾರಿನವರೆಗೆ ಸಾಕಾಗುವಷ್ಟು ಸಂಪಾದನೆಯೊಂದಿಗೆ ಬಂದ ಸುಮತಿಯನ್ನು ನೋಡಿ ವಿಶ್ವಜಿತ್ತು ಸಂತೋಷದಿಂದ ಉಬ್ಬಲಿಲ್ಲ.

ರಾಜನ ಮುಂದೆ ಅವಳು ತೋರಿಸಿದ ಪ್ರವರ್ತನೆ ತಿಳಿದು ಅವನು ಕರಗಿಬಿಡಲೂ ಇಲ್ಲ. ಸುಮತಿಯನ್ನು ಬಿಟ್ಟುಬಿಡಲಿಕ್ಕೇ ಅವನು ನಿರ್ಣಯಿಸಿಕೊಂಡನು.

ಇದನ್ನು ತಿಳಿದು ರಾಜನು ವಿಶ್ವಜಿತ್ತುವನ್ನು ಕರೆಯಿಸಿ, ಅವನು ತನ್ನ ಮಾತು ಕೇಳಿ ಹೆಂಡತಿಯನ್ನು ಸ್ವೀಕರಿಸದೆ ಹೋದರೆ ಶಿರಚ್ಛೇದ ಮಾಡುವುದಾಗಿ ಹೆದರಿಸಿದನು.

ವಿಶ್ವಜಿತ್ತು ಸ್ವಲ್ಪವೂ ಹೆದರದೆ, “ಪ್ರಭು, ನಾನು ಏನು ಮಾಡಿದರೆ ನನಗೆ ಶಿರಚ್ಛೇದ ಶಿಕ್ಷೆ ವಿಧಿಸುವಿರೋ ಅದನ್ನು ಮಾಡಲು ನಾನು ಸಿದ್ಧನಾಗಿದ್ದೇನೆ. ನಾನೊಬ್ಬ ವೀರಪುರುಷ, ನನ್ನ ಹೆಂಡತಿ ತಂದ ವಜ್ರ ವೈಡೂರ್ಯಗಳು ನನ್ನನ್ನು ಆನಂದಪಡಿಸಲಾರವೆಂದು ನಿಮಗೆ ಗೊತ್ತಿದೆ. ಆದರೂ ನೀವು ನನ್ನ ಹೆಂಡತಿಗೆ ದೊಡ್ಡ ಧನರಾಶಿಯನ್ನೇ ಕೊಟ್ಟು ಕಳಿಸಿದ್ದೀರಿ. ಒಬ್ಬ ಸೈನಿಕನಿಗೆ ಕೊಡುವ ಕೆಲಸದ ಹಾಗೆ ನೀವು ನನ್ನನ್ನು ‘ರಣರಂಗಕ್ಕೆ ಕಳುಹಿಸಿಬಿಡಿರಿ ಸಾಕು. ಅದು ನನಗೆ ಆನಂದದಾಯಕ ವಾಗಿರುತ್ತದೆ. ಆದರೆ ನಿಮಗೆ ನಾನು ಹಾಗೆ ಬದುಕುವುದು ಇಷ್ಟವಿಲ್ಲ. ಮಧ್ಯಮಮಾರ್ಗವನ್ನು ಅವಲಂಬಿಸಲು ನನಗೆ ಇಷ್ಟವಿಲ್ಲ. ಆದ್ದರಿಂದ ಆ ಶಿರಚ್ಛೇದವನ್ನು ನಾನೇ ಮಾಡಿಕೊಳ್ಳುತ್ತೇನೆ!” ಎಂದು ಹೇಳಿದನು.

ನೀತಿ: ಸಂಸಾರವೆಂದರೆ ಒಬ್ಬರು ಹೇಳಿ ನಡೆಯುವಂತಹುದಲ್ಲ. ಗಂಡ ಹೆಂಡಿರ ಮನಸ್ಸಿನಲ್ಲಿ ಕೊಟ್ಟು ಕೊಳ್ಳುವ ಭಾವನೆ ಇರಬೇಕು.

Leave a Reply

Your email address will not be published. Required fields are marked *