Breaking News

ಔರಂಗಜೇಬನ ಹುಲಿಯನ್ನು ಕೊಂದ ಪೃಥ್ವಿಸಿಂಹ - ನೀತಿ ಕಥೆಗಳು 4 - Kannada Moral Stories 4

ಔರಂಗಜೇಬನ ಹುಲಿಯನ್ನು ಕೊಂದ ಪೃಥ್ವಿಸಿಂಹ | ನೀತಿ ಕಥೆಗಳು 4

ಔರಂಗಜೇಬನ ಹುಲಿಯನ್ನು ಕೊಂದ ಪೃಥ್ವಿಸಿಂಹ | ನೀತಿ ಕಥೆಗಳು 4 [Kannada Moral Stories 4]

ಮೊಗಲ್ ಅರಸ ಔರಂಗಜೇಬನು ಕೆಲವು ಅನಿವಾರ್ಯ ರಾಜಕೀಯ ಕಾರಣಗಳಿಂದಾಗಿ ಹಲವು ಸಮಯಗಳಲ್ಲಿ ಹಲವಾರು ಹಿಂದೂ ರಾಜರೊಂದಿಗೆ ಕಪಟ ಮೈತ್ರಿಯನ್ನು ಪ್ರಕಟಿಸುತ್ತಿದ್ದನು.

ಒಂದು ಸಲ ಆಗ್ರಾಕ್ಕೆ ಬಂದಿದ್ದ ಜೋಧಪುರದ ರಾಜಾ ಯಶವಂತಸಿಂಹ, ಅವನ ಮಗ ಪೃಥ್ವಿಸಿಂಹರು ಔರಂಗಜೇಬನನ್ನು ನೋಡಲು ಹೋದರು. ಅವನು ಅವರನ್ನು ತಾನೇ ಕರೆದುಕೊಂಡು ಹೋಗಿ ತನ್ನ ಸುಂದರ ಉದ್ಯಾನದ ಅದ್ಭುತಗಳನ್ನು ತೋರಿಸಿದನು.

ಯಶವಂತಸಿಂಹನು ಅವೆಲ್ಲವನ್ನೂ ನೋಡಿ ಆನಂದಿಸಿ. ಅಭಿನಂದಿಸಿದನು. ಆದರೆ ಉದ್ಯಾನದ ಮೂಲೆಯಲ್ಲಿದ್ದ ದೊಡ್ಡ ಬೋನನ್ನು ತೋರಿಸಿದಾಗ, ಅವನು ಯಾವ ಆಸಕ್ತಿಯನ್ನೂ ತೋರಿಸಲಿಲ್ಲ. ಅದು ಔರಂಗಜೇಬನಿಗೆ ಆಶ್ಚರ್ಯವನ್ನುಂಟು ಮಾಡಿತು. ಏಕೆಂದರೆ ಆ ಬೋನಿನಲ್ಲಿ ಒಂದು ದೊಡ್ಡ ಹುಲಿಯು ಇತ್ತು.

“ಈ ಹುಲಿಯ ಗರ್ಜನೆಯನ್ನು ಕೇಳಿದರೆ ಸಾಕು, ಧೈರ್ಯವಂತರು ಸಹಾ ಹೆದರಿ ಓಡಬೇಕಾದ್ದೇ!” ಎಂದನು ಔರಂಗಜೇಬ.

ಯಶವಂತಸಿಂಹನು ಹುಲಿಯ ಕಡೆಗೆ ಒಂದು ಸಲ ನೋಡಿ, ಔರಂಗಜೇಬನ ಕಡೆಗೆ ತಿರುಗಿ, “ನೀವು ಎಂತಹ ಧೈರ್ಯವಂತರ ಬಗ್ಗೆ ಹೇಳುತ್ತಿರುವಿರೋ ನನಗೆ ತಿಳಿಯದು. ಆದರೆ, ನಮ್ಮ ರಾಜ್ಯದಲ್ಲಿ ಮಾತ್ರ ಮಕ್ಕಳು ಸಹಾ ಇಂತಹ ಮೃಗಗಳೊಡನೆ ಆಟವಾಡುತ್ತಾರೆ!” ಎಂದನು.

“ಹಾಗೇನೂ!” ಎಂದನು ಔರಂಗಜೇಬನು ಗೇಲಿಯಿಂದ.

“ನೀವು ನನ್ನ ಮಾತನ್ನು ನಂಬುತ್ತಿಲ್ಲ, ಅಲ್ಲವೇ?” ಎಂದನು ರಾಜನು.

ಔರಂಗಜೇಬನು ನಗುತ್ತಾ, “ಮೊದಲು ನಿಮ್ಮ ಮಾತಿನಲ್ಲಿ ನಿಮಗೇ ನಂಬಿಕೆಯಿದೆಯೇ ಎಂಬುದೇ ಸಂದೇಹ. ಈ ಹುಲಿಯ ಬಾಲವನ್ನು ಮುಟ್ಟಿ, ಪ್ರಾಣ ಉಳಿಸಿಕೊಳ್ಳಬಲ್ಲ ಧೀರನು ನಿಮ್ಮಲ್ಲಿ ಇರುವನೇ?” ಎಂದನು. ಯಶವಂತಸಿಂಹನು ತನ್ನ ಮಗನ ಕಡೆಗೆ ನೋಡಿದನು.

ಪೃಥ್ವಿಸಿಂಹನು ಕೂಡಲೇ ಹುಲಿಯ ಬೋನನ್ನು ತೆಗೆದುಕೊಂಡು ಒಳಕ್ಕೆ ಹೋದನು. ಹುಲಿಯು ಅವನ ಮೇಲೆರಗಿತು. ಯುವರಾಜನು ಅದರ ತಲೆಯ ಮೇಲೆ ಬಲವಾಗಿ ಹೊಡೆದಾಗ ಅದು ನೆಗೆದು ಅಂಗಾತವಾಗಿ ಬಿದ್ದು ಹೋಯಿತು.

ಔರಂಗಜೇಬನು ಅತ್ಯಾಶ್ಚರ್ಯಗೊಳುತ್ತಾ ನೋಡುತ್ತಿರುವಂತೆಯೇ, ಯುವರಾಜನು ಹುಲಿಯು ನೆಲಕ್ಕೊರಗುವವರೆಗೂ ಭೀಕರವಾಗಿ ಹೋರಾಡಿದನು. ಅದು ಸತ್ತಿತೆಂದು ತಿಳಿದ ನಂತರ ರಕ್ತವು ಹರಿಯುತ್ತಿರುವ ಗಾಯವಾದ ದೇಹದೊಡನೆ ಬೋನಿನಿಂದ ಹೊರಬಂದನು.

ಈ ದೃಶ್ಯವನ್ನು ನೋಡಿದ ಔರಂಗಜೇಬನ ಮುಖವು ಒಣಗಿ ಹೋಯಿತು. ಅವನ ಬಾಯಲ್ಲಿ ಮಾತೇ ಬರಲಿಲ್ಲ. ಅವನು ಜೋದ್‌ಪುರದ ಯುವರಾಜನ ಧೈರ್ಯ, ಸಾಹಸಗಳನ್ನು ಶಕ್ತಿ, ಸಾಮರ್ಥ್ಯಗಳನ್ನೂ ಪ್ರಶಂಸಿಸಿದನು.

ನೀತಿ: ಸಾಹಸವಂತರು ಅಧಿಕಾರಗಳನ್ನು ಲಕ್ಷಿಸಲಾರರು. ತಮ್ಮ ಪ್ರಾಣಗಳನ್ನು ಅದಕ್ಕಿಂತ ಹೆಚ್ಚು ಅಲಕ್ಷಿಸುವರು. ಅಂಥವರ ದುಸ್ಸಾಹಸವು ಮಹಾ ಉದಾತ್ತವಾದದ್ದು.

Leave a Reply

Your email address will not be published. Required fields are marked *