Breaking News

ನೇಗಿಲ ಯೋಗಿ | ನೀತಿ ಕಥೆಗಳು [Kannada Moral Stories 9]

ನೇಗಿಲ ಯೋಗಿ | ನೀತಿ ಕಥೆಗಳು [Kannada Moral Stories 9]

ಸುಮಾರು ಎರಡು ಸಾವಿರ ವರ್ಷಗಳ ಹಿಂದೆ ರೋಮ್ ದೇಶದಲ್ಲಿ ಪ್ರಜಾಸತ್ತಾತ್ಮಕ ಆಡಳಿತಕ್ಕೆ ಪ್ರಯತ್ನಗಳು ನಡೆದಿದ್ದವು.

ರೋಮನ್ನರ ಮುಖ್ಯ ವೃತ್ತಿ ಬೇಸಾಯವೇ ಆದರೂ, ಗಂಡಸರೆಲ್ಲರೂ ಕ್ಷಾತ್ರ ವಿದ್ಯೆಗಳಲ್ಲಿ ಸಮರ್ಥರು. ಅವರ ಅಗತ್ಯತೆಗಳು ಕಡಿಮೆಯಾಗಿದ್ದುದರಿಂದ, ಅದಕ್ಕಾಗಿ ಅವರು ಸರ್ಕಾರವನ್ನು ಆಶ್ರಯಿಸದೇ ತಾವೇ ಸ್ವಂತವಾಗಿ ಏರ್ಪಾಡು ಮಾಡಿಕೊಳ್ಳುತ್ತಿದ್ದರು. ದೇಶದಲ್ಲಿದ್ದ ಚಿಕ್ಕ ಸೇನೆಯು ಆಗಾಗ ತರಬೇತಿ ಪಡೆಯುತ್ತಿತ್ತು.

ಒಂದು ಸಲ ರೋಮನ್ ಸೈನಿಕರು ತರಬೇತಿಗಾಗಿ ಬೆಟ್ಟದ ಬುಡದಲ್ಲಿ ತಂಗಿದ್ದಾಗ, ರಾತ್ರಿಯ ಸಮಯದಲ್ಲಿ ಶತ್ರುಗಳು ಹಠಾತ್ತನೆ ದಾಳಿ ಮಾಡಿದರು.

ಶತ್ರುಗಳು ತಮ್ಮ ಸೈನ್ಯವನ್ನು ಕೊಂದು, ತಮ್ಮ ರಾಜ್ಯವನ್ನು ಕೊಳ್ಳೆ ಹೊಡೆದು, ತಮ್ಮನ್ನು ಬಂಧಿಗಳನ್ನಾಗಿ ಮಾಡಿ, ಪರರಾಜ್ಯಗಳಲ್ಲಿ ಗುಲಾಮರನ್ನಾಗಿ ಮಾರುತ್ತಾರೆಂದು ಜನರು ಹೆದರಿದರು.

ರೋಮನ್ ಆಡಳಿತ ಮಂಡಳಿ ಸಭೆ ಸೇರಿ, “ಬಂಧಿಗಳಾದ – ರೋಮನ್ ಸೈನಿಕರನ್ನು ಕೊಲ್ಲಲು ಯತ್ನಿಸಬೇಡಿ. ಅವರೂ ನಿಮಗೆದುರಾಗಿ ದಾಳಿ ಮಾಡಿದರೆ ಎರಡು ಕಡೆಯಲ್ಲೂ ಪ್ರಾಣ ನಷ್ಟವಾಗಬಹುದು. ಒಂದು ದಿನ ಸಹನೆಯಿಂದಿದ್ದರೆ ನಾವು ಶರಣಾಗುವ ತೀರ್ಮಾನವನ್ನು ತೆಗೆದುಕೊಳ್ಳಬಹುದು!” ಎಂದು ಶತ್ರುಗಳಿಗೆ ಸುದ್ದಿ ಕಳಿಸಿತು.

ಇದು ಶತ್ರುಗಳಲ್ಲಿ ಉತ್ಸಾಹವನ್ನುಂಟು ಮಾಡಿತು. ಹೇಗಾದರೂ ತಮಗೇ ಒಳ್ಳೆಯದಾಗುತ್ತದೆನ್ನುವ ದೃಢವಿಶ್ವಾಸದಿಂದ, ರೋಮನ್ ಸೈನಿಕರನ್ನು ತಮ್ಮ ಅಧೀನದಲ್ಲೇ ಇಟ್ಟುಕೊಂಡು, ಉಳಿದ ಸೈನಿಕರು ಆ ದಿನವೆಲ್ಲವೂ ಮನರಂಜನೆಯಿಂದ ಕಳೆದರು.

ಈ ಅಪಾಯಕರ ಪರಿಸ್ಥಿತಿಗೆ ಜನರ ಆದರ, ಅಭಿಮಾನಗಳಿಗೆ ಪಾತ್ರನಾದ ಸಿನ್ಸಿನಾಟಸ್ ಎನ್ನುವ ರೈತ ನಾಯಕನನ್ನು ಸಂಪರ್ಕಿಸ ಬೇಕೆಂದು ರೋಮನ್ ಆಡಳಿತ ಮಂಡಳಿ ತೀರ್ಮಾನಿಸಿತು.

ಮಂಡಳಿ ಸದಸ್ಯರು ಅವನನ್ನು ನೋಡಲು ಹೊರಟಾಗ, ಸಿನ್ಸಿನಾಟಸ್ ಹೊಲವನ್ನು ಉಳುತ್ತಿದ್ದನು. ಅವರನ್ನು ನೋಡಿದ ಕೂಡಲೇ, ಆತ ನೇಗಿಲು, ಎತ್ತುಗಳನ್ನು ಹೊಲದಲ್ಲೇ ಬಿಟ್ಟು ಹೊರಬಂದನು.

ಅವನು ತಮ್ಮ ರಾಜ್ಯದ ದೃಢಕಾಯರನ್ನು ಕರೆದು, ಒಬ್ಬೊಬ್ಬರೂ ಒಂದೊಂದು ಮರದ ಹಲಗೆಯನ್ನು ತೆಗೆದುಕೊಂಡು ಬರುವಂತೆ ಅದೇಶವಿತ್ತನು.

ರಾತ್ರಿಯಾಯಿತು. ಅವರೆಲ್ಲರೂ ಹೋಗಿ ಬೆಟ್ಟದ ಬಳಿ ತಮ್ಮ ಸೈನಿಕರನ್ನು ಬಂಧಿಗಳನ್ನಾಗಿಸಿದ ಶತ್ರುಗಳು ಗಾಢ ನಿದ್ದೆಯಲ್ಲಿದ್ದಾಗ, ಅವರ ಸುತ್ತಲೂ ಹಲಗೆಗಳನ್ನು ಹಿಡಿದುಕೊಂಡು ನಿಂತರು ಶತ್ರುಗಳ ಸುತ್ತಲೂ ಒಂದು ಗೋಡೆ ತಯಾರಾಯಿತು.

ಬೆಳಗಾಯಿತು. ಎಚ್ಚರವಾದ ಶತ್ರುಗಳು ನಡೆದದ್ದನ್ನು ನೋಡ ನಿಬ್ಬೆರಗಾದರು. ಹೊರಗೆ ತಮ್ಮ ಸುತ್ತಲೂ ಜನರ ಗೋಡೆ, ಒಳಗೆ ಯುದ್ಧಕ್ಕೆ ಸಿದ್ಧವಾಗಿರುವ ಸುಶಿಕ್ಷಿತರಾದ ಸೈನಿಕರು.

ಒಳಗೂ, ಹೊರಗೂ ಯಾವ ಕಡೆಗೂ ಹೋಗಲಾರದಂಥಾ ಪರಿಸ್ಥಿತಿ ಉಂಟಾಗಿದೆ ಎಂದು ಅವರು ಅರಿತರು. ಅವರೆಲ್ಲರೂ ಶರಣಾದರು.

ಅವರೆಲ್ಲರನ್ನೂ ವಿಚಾರಣೆಗಾಗಿ ಆಡಳಿತ ಮಂಡಳಿ ಕಡೆಗೆ ನಡೆಸಿಕೊಂಡು ಹೋಗುತ್ತಿರುವಾಗ, ಸಿನ್ಸಿನಾಟಸ್ ತನ್ನ ಹೊಲದ ಕಡೆ ಹೆಜ್ಜೆ ಹಾಕಿದನು.

ಮಂಡಳಿ ಸದಸ್ಯರೆಲ್ಲರೂ, “ಸ್ವಾಮೀ, ನಿಮ್ಮನ್ನು ನಮ್ಮ ಅರಸನನ್ನಾಗಿ ಮಾಡಿಕೊಳ್ಳಬೇಕೆಂದು ತೀರ್ಮಾನಿಸಿದ್ದೇವೆ. ನಮ್ಮ ಜೊತೆ ಬನ್ನಿ” ಎಂದರು.

ಆದರೆ ಸಿನ್ಸಿನಾಟಸ್, ಅವರ ಮಾತನ್ನು ಕಿವಿಯ ಮೇಲೆ ಹಾಕಿಕೊಳ್ಳದೇ ನೇರವಾಗಿ ಹೊಲದ ಕಡೆ ನಡೆದನು. ಮತ್ತೆ ಎಂದಿನಂತೆ ನೇಗಿಲನ್ನು ಹಿಡಿದು ಹೊಲವನ್ನು ಉಳುವುದಕ್ಕೆ ಪ್ರಾರಂಭಿಸಿದನು.

ನೀತಿ: ಅಧಿಕಾರದ ಬಗ್ಗೆ ಯಾವುದೇ ವ್ಯಾಮೋಹವಿರದವರು ತಮ್ಮ ಕರ್ತವ್ಯವನ್ನಷ್ಟೇ ಮಾಡುವರು.

Leave a Reply

Your email address will not be published. Required fields are marked *