Breaking News

ಸ್ವಾರ್ಥ ಬಲ ಮನುಷ್ಯ ಬಲಕ್ಕಿಂತಲೂ ಅಪಾಯ | Kannada Moral Stories 11

ಸ್ವಾರ್ಥ ಬಲ ಮನುಷ್ಯ ಬಲಕ್ಕಿಂತಲೂ ಅಪಾಯ | Kannada Moral Stories 11

ಮಾಧವಸೇನನು ಮಗಧ ದೇಶದ ರಾಜನಾಗಿದ್ದನು. ಅವನು ಆಗಾಗ ವೇಷ ಬದಲಾವಣೆ ಮಾಡಿಕೊಂಡು ಸಂಚಾರ ಮಾಡುವ ಕ್ರಮವಿತ್ತು. ಹಾಗೆ ಅವನು ಒಂದು ದಿನ ಅರ್ಧರಾತ್ರಿಯ ಹೊತ್ತಿನಲ್ಲಿ ವೇಷ ಬದಲಾವಣೆ ಮಾಡಿಕೊಂಡು ನಗರದಲ್ಲಿ ಸಂಚಾರ ಮಾಡುತ್ತ ಒಂದು ವಿಚಿತ್ರವನ್ನು ನೋಡಿದನು.

ಒಂದು ಮರದ ಕೆಳಗೆ ದೊಡ್ಡದೊಂದು ಇಲಿಯು ನಿದ್ರೆಯಲ್ಲಿದ್ದಿತು. ಒಂದು ಬೆಕ್ಕು ಯಾವುದೋ ನಾಯಿಗೆ ಹೆದರಿ ಓಡುತ್ತಾ ಆ ಮರದ ಕೆಳಗೆ ಬಂದು, ಇಲಿಯನ್ನು ನೋಡಿ ಮತ್ತಷ್ಟು ಹೆದರಿ ಹಾರಿ ಬಿದ್ದು ಓಡಿ ಹೋಯಿತು. ಆ ವಿಚಿತ್ರ ದೃಶ್ಯವು ರಾಜನನ್ನು ಚಕಿತಗೊಳಿಸಿತು.

ಮಾಧವಸೇನ ರಾಜನು ಇದನ್ನು ನೋಡಿ, “ಏನಿದು ನನ್ನ ರಾಜ್ಯದಲ್ಲಿ ಇಲಿಗಳು ಬೆಕ್ಕನ್ನು ಸಹಾ ಹೆದರಿಸುವಷ್ಟು ಬಲಿತು ಹೋಗಿವೆಯೆಂದಾಯಿತು. ನಿದ್ರಿಸಿರುವ ಇಲಿಯೇ ಅಷ್ಟು ಭಯಂಕರವಾದರೆ ಎಚ್ಚರದಲ್ಲಿದ್ದಾಗ ಏನಾದೀತು! ಇಂಥವುಗಳನ್ನು ಬದುಕಲು ಬಿಡಬಾರದು!” ಎಂದುಕೊಂಡು ಒರೆಯಿಂದ ಕತ್ತಿಯನ್ನು ತೆಗೆದನು.

ಆಗ ಇನ್ನಿಷ್ಟು ಆಶ್ಚರ್ಯವಾಗುವಂತೆ ಆ ಇಲಿಯು ಮಾನವಾಕಾರದಲ್ಲಿರುವುದು ಕಂಡಿತು.

ರಾಜನು ತನ್ನ ಕಣ್ಣನ್ನು ತಿಕ್ಕಿಕೊಂಡು ನೋಡಿದನು. ಆಶ್ಚರ್ಯ ಪಡುತ್ತ, “ಯಾರು ನೀನು? ಇಲಿಯ ರೂಪದಲ್ಲಿ ಇಲ್ಲಿ ಬಿದ್ದುಕೊಂಡಿರುವುದೇಕೆ? ನಿನ್ನ ನಿಜವಾದ ರೂಪ ಯಾವುದು?” ಎಂದು ಕೇಳಿದನು.

“ನಾನು ರಾಕ್ಷಸ ರಾಜನಾದ ಪ್ರಚಂಡ. ಮುಖ್ಯವಾದ ಒಂದು ಕೆಲಸದ ಮೇಲೆ ಭೂಲೋಕಕ್ಕೆ ಬಂದೆನು. ನನ್ನ ಆಕಾರವನ್ನು ನೋಡಿ ಇಲ್ಲಿಯವರು ಹೆದರುವರೆಂದು ಮಾನವ ರೂಪದಲ್ಲಿ ತಿರುಗುತ್ತಿದ್ದೇನೆ. ಇಂತಹ ಹೊರ ಪ್ರದೇಶದಲ್ಲಿ ನಿದ್ದೆ ಮಾಡುವಾಗ ಮಾನವರಿಗಿರುವ ಪ್ರಾಣಾಪಾಯವು ಪ್ರಾಣಿಗಳಿಗೆ ಇಲ್ಲದ್ದರಿಂದ ಇಲಿಯ ರೂಪದಲ್ಲಿ ಮಲಗಿದ್ದೇನೆ. ಸರಿ. ಕತ್ತಿ ಎತ್ತಿದ ನೀನು ಯಾರು?” ಎಂದು ಕೇಳಿದನು ಅವನು.

ಮಾಧವಸೇನನು ಮತ್ತಷ್ಟು ಆಶ್ಚರ್ಯಪಟ್ಟು, “ಮಾನವರ ಪ್ರಾಣಕ್ಕೆ ಅದೇನು ಅಪಾಯ ಬರುತ್ತೆ? ಏಕೆ ರಕ್ಷಣೇ ಇಲ್ಲದೆ ಹೋಗುತ್ತದೆ? ನಿನ್ನ ಮಾತಿನೊಳಗೆ ಏನೋ ಮರ್ಮವಿರುವ ಹಾಗಿದೆ. ಸ್ಪಷ್ಟವಾಗಿ ಹೇಳು. ನನ್ನ ಹೊರತು ಬೇರೆ ಯಾರಾದರೂ ನಿನ್ನನ್ನು ಇಲಿಯ ರೂಪದಲ್ಲಿ ನೋಡಿರುತ್ತಿದ್ದರೆ ನಿನ್ನ ಪ್ರಾಣ ಯಾವಾಗಲೋ ಹೋಗಿಬಿಡುತ್ತಿತ್ತು!” ಎಂದು ತಾನು ಯಾರೆಂಬುದನ್ನೂ ಹೇಳಿದನು.

ಅದನ್ನೆಲ್ಲ ಕೇಳಿ ರಾಕ್ಷಸನು, “ಇಂಥ ಸಂದರ್ಭದಲ್ಲಿ ರಾಕ್ಷಸರಿಗೆ ಒಂದು ನಿಯಮವಿದೆ. ಮನುಷ್ಯ ರೂಪ ಧರಿಸಿದಾಗ ನಮ್ಮನ್ನು ನಾವು ಸ್ವಂತಶಕ್ತಿಯಿಂದ ಕಾಪಾಡಿಕೊಳ್ಳಬೇಕು. ಆದರೆ ಆಗ ನಮಗೆ ರಾಕ್ಷಸ ಬಲವಿರುವುದಿಲ್ಲ. ಮನುಷ್ಯರಿಗಿರುವಷ್ಟು ಶಕ್ತಿ ಮಾತ್ರವೇ ಇರುತ್ತದೆ.

ಇತರ ಪ್ರಾಣಿಗಳ ರೂಪದಲ್ಲಿರುವಾಗ ಸೃಷ್ಟಿಯೊಳಗಿನ ಯಾವ ಪ್ರಾಣಿಗಳಿಂದಲೂ ನಮಗೆ ಅಪಾಯ ಬರುವುದಿಲ್ಲ. ಇಷ್ಟೇ ಅಲ್ಲದೆ ನನ್ನ ಮಾತಿನಲ್ಲಿ ಬೇರೆ ದುರುದ್ದೇಶದ ಮರ್ಮವೇನಿಲ್ಲ. ಅದೆಲ್ಲ ಹೇಗಿದ್ದರೂ ರಾಜನಾದ ನಿನ್ನನ್ನು ನೋಡಿದುದರಿಂದ ನನಗೆ ಬಹಳ ಸಂತೋಷವಾಗಿದೆ. ಮಾನವ ಪ್ರಭುವಿಗೆ ರಾಕ್ಷಸ ರಾಜ ಪ್ರಚಂಡನ ವಂದನೆಗಳು!” ಎಂದು ಮಾಧವಸೇನನಿಗೆ ಕೈ ಜೋಡಿಸಿದನು.

“ರಾಕ್ಷಸ ರಾಜನಾಗಿರುವ ನೀನು ಬೇರೆ ರಾಕ್ಷಸರನ್ನು ಕಳುಹಿಸದೆ ನೀನೇ ನನ್ನ ರಾಜ್ಯಕ್ಕೆ ಬಂದ ಕೆಲಸವೇನು?” ಎಂದು ಕೇಳಿದನು ಮಾಧವಸೇನ.

“ನಮ್ಮ ರಾಕ್ಷಸರಲ್ಲಿ ನಾವು ಒಂದು ಪದ್ಧತಿಯನ್ನಿಟ್ಟಿದ್ದೇವೆ. ಇತ್ತೀಚೆಗೆ ನಮ್ಮ ರಾಕ್ಷಸ ಪೌರರು ಕೆಲವರು ಭೂಲೋಕದಲ್ಲಿ ಸಂಚಾರ ಮಾಡುತ್ತ, ಪದ್ಧತಿ ಮೀರಿ ನರಭಕ್ಷಣ ಮಾಡಿ ಬಂದರು. ನರಭಕ್ಷಣ ರಾಕ್ಷಸರಿಗೆ ನಿಷಿದ್ದವೇನೂ ಅಲ್ಲವಷ್ಟೆ?

ಆದರೆ ನಮಗೆ ಕೆಲವು ಕಠೋರವಾದ ನಿಯಮಗಳೂ ಇವೆ. ಆದುದರಿಂದ ರಾಕ್ಷಸರು ಈಗ ಆತ್ಮರಕ್ಷಣೆಗೆ ಕೂಡಾ ಮನುಷ್ಯರನ್ನು ಕೊಲ್ಲಬಾರದು. ಯಾವ ಪ್ರಾಣಿಯಾದರೂ ಆಹಾರಕ್ಕಾಗಿ ಮನುಷ್ಯನನ್ನು ಕೊಂದರೆ, ಆ ಮನುಷ್ಯನನ್ನು ಅಪಹರಿಸಿ ತಿನ್ನಬಾರದು. ಈ ನಿಯಮಗಳಿಂದ ರಾಕ್ಷಸರಿಗೆ ಈಗ ನರಭಕ್ಷಣ ಸಾಧ್ಯವಾಗದೆ ಹೋಗಿದೆ. ಆದ್ದರಿಂದ ಅವರು ಕಳ್ಳತನದಿಂದ ಬಂದು ನರಭಕ್ಷಣ ಮಾಡಿದುದು ಗೊತ್ತಾಗಿದೆ!” ಎಂದನು ರಾಕ್ಷಸ.

“ಹಾಗಾದರೆ ಇಲ್ಲಿಗೆ ಬಂದ ರಾಕ್ಷಸರು ಹೇಗೆ ಯಾವ ರೀತಿಯಲ್ಲಿ ನರಭಕ್ಷಣ ಮಾಡಿದರು? ಅದು ನಿನಗೆ ಹೇಗೆ ಗೊತ್ತಾಯಿತು?” ಎಂದು ಕೇಳಿದನು ರಾಜ.

“ಅದನ್ನೇ ಹೇಳಲಿದ್ದೇನೆ. ಅವರು ನರಭಕ್ಷಣ ಮಾಡಿದ್ದೇನೋ ನಿಜವೇ. ಅವರು ಹೇಳುವುದೇನೆಂದರೆ, ತಾವು ನಿಯಮ ತಪ್ಪಲಿಲ್ಲವೆಂದೂ, ಭೂಲೋಕದಲ್ಲಿ ಕುಲಮತಗಳ ಹೆಸರು ಹೇಳಿ, ಕೊಳ್ಳೆ ಹೊಡೆಯುವುದೂ, ಕಳವು ಮಾಡುವುದೂ, ಮನುಷ್ಯರೇ ಇತರ ಮನುಷ್ಯರನ್ನು ಕೊಲ್ಲುವುದೂ ನಡೆಯುತ್ತದೆ. ಹಾಗೆ ಸತ್ತ ಮನುಷ್ಯರನ್ನೇ ತಾವು ತಿಂದೆವೆಂದು ಅವರು ನನ್ನೊಂದಿಗೆ ಹೇಳಿದರು.

ಅವರ ಮಾತಿನಲ್ಲಿ ನಿಜವೆಷ್ಟೆಂದು ಪರೀಕ್ಷಿಸಲಿಕ್ಕಾಗಿ ನಾನು ಸ್ವತಃ ಭೂಲೋಕಕ್ಕೆ ಬಂದಿದ್ದೇನೆ. ಅವರು ಹೇಳಿದುದೆಲ್ಲಾ ನಿಜವೆಂದು ತಿಳಿಯಿತು. ಅದಕ್ಕೆ ಕಾರಣವೇನೆಂದು ತಿಳಿದುಕೊಳ್ಳಲಿಕ್ಕಾಗಿ ಕೆಲವು ದಿನ ಇಲ್ಲಿಯೇ ಉಳಿದಿದ್ದೇನೆ. ಆ ಕಾರಣವೂ ಈಗ ತಿಳಿಯಿತು!” ಎಂದನು ರಾಕ್ಷಸ.

“ಅದೇನು ನೀನು ತಿಳಿದ ಕಾರಣ? ನಾನು ತಿಳಿಯಲೇಬೇಕು!” ಎಂದು ಮಾಧವಸೇನನು ಕುತೂಹಲದಿಂದ ಕೇಳಿದನು.

“ಭೂಲೋಕದಲ್ಲಿರುವ ರಾಜರೊಳಗೆಲ್ಲಾ ಪೂರ್ವ ಕಾಲದ ರಾಕ್ಷಸರ ಅಂಶವಿದೆ. ಆದ್ದರಿಂದಲೇ ಮಾನವರು ಅಸಮರ್ಥರಾದರೂ, ಕ್ರೂರ ಗುಣವುಳ್ಳವರು, ಸ್ವಾರ್ಥಿಗಳು, ದುರಾಶೆಯವರಾದರೂ ಶಕ್ತಿಹೀನರಾದುದರಿಂದ ಮೋಸಗಳಿಗೆ ತೊಡಗುತ್ತಿದ್ದಾರೆ. ಆದ್ದರಿಂದಲೇ ತಮ್ಮೊಳಗೆ ತಾವು ಜಗಳವಾಡಿಕೊಳ್ಳುತ್ತಿದ್ದಾರೆ!” ಎಂದನು ರಾಕ್ಷಸ.

ರಾಕ್ಷಸನ ಮಾತು ಕೇಳಿ ಮಾಧವಸೇನ ರಾಜನಿಗೆ ಬಹಳ ಕೋಪ ಬಂತು. ಭೂಲೋಕದ ರಾಜರಲ್ಲೆಲ್ಲಾ ರಾಕ್ಷಸರ ಗುಣಗಳಿವೆಯೆಂದರೆ ತನ್ನಲ್ಲಿಯೂ ಇದೆ ಎಂದು ತಾನೇ ಅರ್ಥ?

“ರಾಕ್ಷಸನೇ, ನಾನು ಸ್ವಾರ್ಥಿಯೂ ಕ್ರೂರನೂ ಅಲ್ಲವೆಂದು ಈಗಿಂದೀಗಲೇ ರುಜುಪಡಿಸಲು ಸಾಧ್ಯವಿಲ್ಲದಿದ್ದರೂ, ಶಕ್ತಿಸಾಮರ್ಥ್ಯಗಳಿಲ್ಲದವನಲ್ಲವೆಂಬುದನ್ನು ಈಗಲೇ ರುಜುಮಾಡಿ ತೋರಿಸುತ್ತೇನೆ. ಎಲ್ಲಿ ನಿನ್ನ ರಾಕ್ಷಸರೂಪ ಧರಿಸು! ನಿನ್ನನ್ನು ನಾನು ಸೋಲಿಸಿಬಿಡುತ್ತೇನೆ!” ಎಂದು ಎರಡು ಹೆಜ್ಜೆ ಹಿಂದಿಟ್ಟು ಕತ್ತಿಯನ್ನು ಎತ್ತಿದನು.

“ರಾಕ್ಷಸ ರೂಪದಲ್ಲಿರುವ ನನ್ನನ್ನು ಸೋಲಿಸಲು ಯಾವ ಮಾನವನಿಗೂ ಸಾಧ್ಯವಾಗದು. ನನ್ನ ಶಕ್ತಿ ಅಪಾರವಾಗಿದೆ. ಆದುದರಿಂದ ಅಂತಹ ರೂಪ ಧರಿಸಿ ನಿನ್ನನ್ನು ಇದಿರಿಸುವುದು ನ್ಯಾಯವಲ್ಲ. ಹಾಗೂ ನಿನಗೆ ಧೈರ್ಯವಿದ್ದರೆ ನನ್ನ ಈ ರೂಪದಲ್ಲೇ ನನ್ನನ್ನು ಸೋಲಿಸು!” ಎಂದನು ರಾಕ್ಷಸ.

ಅದಕ್ಕೆ ಮಾಧವಸೇನನು ಒಪ್ಪದೆ, “ನಾನು ಈ ಮಗಧ ದೇಶದ ರಾಜ. ಆ ಕಾರಣದಿಂದ ಯಾವ ಮನುಷ್ಯನ ಮೇಲೆಯೂ ಕತ್ತಿ ಎತ್ತಲಾರೆನು. ನನ್ನ ಶಕ್ತಿ ನಿರೂಪಿಸಬೇಕಾದರೆ, ನನ್ನಂಥ ಮನುಷ್ಯನನ್ನು ಗಾಯಪಡಿಸಬೇಕಾಗುತ್ತದೆ. ಅದು ನನ್ನಿಂದಾಗದು. ಆದುದರಿಂದ ನಾನು ನಿಜವಾಗಿಯೂ ನಿನ್ನೊಂದಿಗೆ ಯುದ್ಧ ಮಾಡಬೇಕಾದರೆ, ಅದಕ್ಕೆ ಬಲವಾದ ಕಾರಣವಿರಬೇಕು. ಅಂತಹುದೇನಿಲ್ಲದೆ ಜತೆ ಮಾನವನ ಮೇಲೆ ಸುಮ್ಮನೆ ಹೇಗೆ ಕತ್ತಿಯನ್ನೆತ್ತಲಿ?” ಎಂದನು.

“ಹಾಗಾದರೆ ಕೇಳು. ಮನುಷ್ಯನು ಮನುಷ್ಯನನ್ನು ಕೊಲ್ಲುವುದರಿಂದ ರಾಕ್ಷಸರಿಗೆ ನರಭಕ್ಷಣ ಮಾಡುವ ಅವಕಾಶ ಮತ್ತೆ ಬರುತ್ತದೆ. ಅಂತಹ ಅವಕಾಶ ಹೋಗದಿರಲಿಕ್ಕಾಗಿ ನಾನು ಆಗಾಗ ಭೂಲೋಕಕ್ಕೆ ಬಂದು ಮನುಷ್ಯರನ್ನು ಹುರಿಗೊಳಿಸಿ ಕೆರಳುವಂತೆ ಮಾಡಿ ಹೋಗಿಬಿಡುತ್ತೇನೆ. ಅವರೊಳಗೆ ಕಲಹ ಹುಟ್ಟುವಂತೆ ಮಾಡುತ್ತ ಇರುತ್ತೇನೆ. ಹೀಗೆ ಮಾಡುವ ನನ್ನಂಥವನನ್ನು ಸುಮ್ಮನೆ ಬಿಡುವುದು ನಿನ್ನಂಥ ರಾಜನಿಗೆ ಒಳ್ಳೆಯದಲ್ಲವಷ್ಟೆ?

ಆ ಕಾರಣದಿಂದ ನಾನು ನಿನ್ನ ಶತ್ರುವೆಂದು ತಿಳಿದು ನೀನು ನನ್ನನ್ನು ಯುದ್ಧದಲ್ಲಿ ಸೋಲಿಸಿ ಬಿಟ್ಟರೆ ನೀನು ಹೇಳಿದ ಹಾಗೆ ಕೇಳುತ್ತೇನೆ. ಸರಿಯಷ್ಟೆ?” ಎಂದನು ರಾಕ್ಷಸ.

“ಹಾಗಾದರೆ ನೋಡು ನನ್ನ ಪ್ರತಾಪ!” ಎಂದು ಮಾಧವಸೇನನು ಕತ್ತಿ ಹಿರಿದನು. ರಾಕ್ಷಸನೂ ತನ್ನ ಒರೆಯಿಂದ ಕತ್ತಿ ಸೆಳೆದು ಮಾಧವಸೇನನೊಂದಿಗೆ ಕಲೆ ಬಿದ್ದನು.

ಅದೊಂದು ಮಿಂಚುಗಳ ಯುದ್ಧದಂತೆ ಕೆಲವೇ ಕ್ಷಣಗಳಲ್ಲಿ ರಾಕ್ಷಸನ ಕೈಯಲ್ಲಿದ್ದ ಕತ್ತಿ ಹಾರಿ ಕೆಳಗೆ ಬಿತ್ತು. ಕಣ್ಣುಮುಚ್ಚಿ ಬಿಡಿಸುವುದರೊಳಗೇ ಯುದ್ಧವು ಮುಗಿಯಿತು.

ಆಮೇಲೆ ಮಾಧವಸೇನನೂ ರಾಕ್ಷಸನೂ ಮಲ್ಲಯುದ್ದ ಮಾಡಿದರು. ತನಗಿಂತಲೂ ಬಲಿಷ್ಠನಾದ ರಾಕ್ಷಸನನ್ನು ಮಾಧವಸೇನನು ಯಾವುದೋ ಒಂದು ಮರ್ಮದ ಪಟ್ಟಿನಿಂದ ಕ್ಷಣಮಾತ್ರದಲ್ಲಿ ಹಿಡಿದು ಮೇಲಕ್ಕೆ ಎತ್ತಿ ತಿರುಗಿಸಿ ನೆಲದ ಮೇಲೆ ಹೊಡೆದುರುಳಿಸಿದನು.

ರಾಕ್ಷಸನಿಗೆ ತಲೆ ತಿರುಗಿ ಕಣ್ಣು ಕತ್ತಲೆ ಕವಿಯಿತು. ಸ್ವಲ್ಪ ಹೊತ್ತಿನ ಮೇಲೆ ಅವನು ಸಮಾಳಿಸಿಕೊಂಡು ಎದ್ದು, “ನಿನ್ನ ಶಕ್ತಿಯುಕ್ತಿಗಳು ಅಪೂರ್ವವೇ ಸರಿ. ನಿನಗೆ ನಾನು ತಪ್ಪದೆ ಸಹಾಯ ಮಾಡುತ್ತೇನೆ. ನಿನಗೇನು ಬೇಕೋ ಕೇಳು!” ಎಂದು ಆಗಿಂದಾಗಲೇ ಬೃಹದಾಕಾರದ ಭಯಂಕರ ರಾಕ್ಷಸನಾಗಿ ಮಾರ್ಪಟ್ಟು ನಿಂತನು.

ಮಾಧವಸೇನನು ಅವನ ಮಾತಿಗೆ ನಗುತ್ತ, “ರಾಕ್ಷಸ ರಾಜಾ ನನ್ನನ್ನು ಕ್ಷಮಿಸು. ಏಕೆಂದರೆ ನಿನ್ನಿಂದ ಸಹಾಯ ಪಡೆಯುವ ಅರ್ಹತೆ ನನಗಿಲ್ಲ. ನಿನಗೆ ಶಕ್ತಿ ಇದೆಯೇ ಹೊರತು ಬುದ್ದಿ ಮಾತ್ರ ಇಲ್ಲ!” ಎಂದು ಹೇಳಿದನು.

ನೀತಿ: ಸ್ವಾರ್ಥ ಬಲವು ಮನುಷ್ಯ ಬಲಕ್ಕಿಂತಲೂ ಬಹಳ ಹೆಚ್ಚು ಅಪಾಯ.

Leave a Reply

Your email address will not be published. Required fields are marked *