Breaking News

ತಾಯಿಯ ಮುಗ್ದತೆ - ನೀತಿ ಕಥೆಗಳು 1 - Moral Stories in Kannada

ತಾಯಿಯ ಮುಗ್ದತೆ | ನೀತಿ ಕಥೆಗಳು 1

ತಾಯಿಯ ಮುಗ್ದತೆ | ನೀತಿ ಕಥೆಗಳು 1 [Moral Stories in Kannada]

ಸೋವಿಯತ್ ರಷ್ಯಾವನ್ನು ಆಳಿದ ಕಮ್ಯೂನಿಸ್ಟ್ ಪಕ್ಷದ ಮೊದಲನೇ ಅಧ್ಯಕ್ಷನೇ ಲೆನಿನ್. ಲೆನಿನ್ ಸಾಯುವ ಎರಡು ವರ್ಷದ ಮುನ್ನ ಜೋಸೆಫ್ ಸ್ಟಾಲಿನ್ ಪಕ್ಷದ ಕಾರ್ಯದರ್ಶಿಯಾಗಿದ್ದನು. ಲೆನಿನ್‌ನ ಮರಣಾ ನಂತರ ಸ್ಟಾಲಿನ್‌ನು ರಷ್ಯಾದ ಅಧ್ಯಕ್ಷನಾದನು.

ಪಕ್ಷದ ಕಾರ್ಯದರ್ಶಿಯಾಗಿ ಅಧಿಕಾರ ವಹಿಸಿಕೊಂಡ ಮೇಲೆ ಸ್ಟಾಲಿನ್ ತನ್ನ ತಾಯಿಯನ್ನು ನೋಡ ಬಯಸಿ ತನ್ನ ಸ್ವಂತ ಊರಿಗೆ ಹೋದನು.

ವೃದ್ಧೆಯಾಗಿದ್ದ ಆ ತಾಯಿಯು ಮಗನನ್ನು ಒಮ್ಮೆ ತೃಪ್ತಿಯಾಗಿ ನೋಡಿ, ಅವನ ಬಗ್ಗೆ ಪ್ರಜೆಗಳು ಬಗೆಬಗೆಯಾಗಿ ಹೇಳುತ್ತಿದ್ದ ವಿಷಯಗಳನ್ನು ಪ್ರಸ್ತಾಪಿಸಿ, ಅವು ಯಾವುವೂ ತನಗೇ ಅರ್ಥವಾಗಲಿಲ್ಲವೆಂದು ಹೇಳಿ ಕೊನೆಗೆ, “ನೀನು ಈಗೇನು ಮಾಡುತ್ತಿರುವೆ ಹೇಳಪ್ಪಾ, ಯಾವುದಾದರೂ ಕೆಲಸ ಸಂಪಾದಿಸಿರುವೆಯಾ? ಹಾಗಿದ್ದಲ್ಲಿ ಅದು ಎಷ್ಟು ಉಪಯೋಗಕರ?” ಎಂದು ಕೇಳಿದಳು.

“ಅಮ್ಮಾ ನಾನು ಸೋವಿಯತ್ ಯೂನಿಯನ್ನಿನ ಕಮ್ಯೂನಿಸ್ಟ್ ಪಕ್ಷದ ಕಾರ್ಯದರ್ಶಿಯಾಗಿದ್ದೇನೆ!” ಎಂದನು ಸ್ಟಾಲಿನ್.

“ಎಲ್ಲರಂತೆಯೇ ನೀನೂ ನನ್ನನ್ನು ಗೊಂದಲಕ್ಕೀಡು ಮಾಡುತ್ತಿರುವೆ. ನಿನ್ನ ಆ ಕೆಲಸ, ಪರಿಸ್ಥಿತಿಗಳು ಹೇಗಿವೆಯೋ ಏನೋ ನನಗೆ ತಿಳಿಯದು. ನೀನು ಸಂತೋಷದಿಂದಿರುವಂತಿದೆ, ನನಗೆ ಅದು ಸಾಕು!” ಎಂದಳು.

ಅವನು ಇತರ ಮುಖ್ಯ ಕಾರ್ಯಗಳನ್ನು ಗಮನಿಸಬೇಕಾಗಿದ್ದುದರಿಂದ ಅಲ್ಲಿಂದ ಹೊರಡಬೇಕಾಗಿ ಬಂದಿತು. “ಅಮ್ಮಾ ನಾನಿನ್ನು ಹೊರಡುತ್ತೇನೆ!” ಎನ್ನುತ್ತಾ ಸ್ಟಾಲಿನ್ ಎದ್ದು ನಿಂತನು.

ಆ ತಾಯಿಯು ಮತ್ತೆ ಒಂದು ಸಲ ಮಗನನ್ನು ಪ್ರೀತಿಯಿಂದ ಮನ ತೃಪ್ತಿಯಾಗುವಂತೆ ನೋಡುತ್ತಾ, “ಒಳ್ಳೆಯದು, ಹೋಗಿ ಬಾಪ್ಪಾ, ತುಂಬಾ ಕಷ್ಟಪಟ್ಟು ಕೆಲಸ ಮಾಡುತ್ತಾ ನಿನ್ನ ಆರೋಗ್ಯವನ್ನು ಕೆಡಿಸಿಕೊಳ್ಳಬೇಡ. ಜೋಪಾನವಾಗಿ ನೋಡಿಕೋ. ನಿನ್ನನ್ನು ಕುರಿತು ಯಾರು ಏನು ಬೇಕಾದರೂ ಹೇಳಿಕೊಳ್ಳಲಿ. ನೀನು ಚಿಕ್ಕವನಾಗಿದ್ದಾಗ ನನ್ನ ಮಾತನ್ನು ಕೇಳಿ ಚೆನ್ನಾಗಿ ಓದಿಕೊಂಡಿದ್ದರೆ ಇಷ್ಟರಲ್ಲಿ ಒಬ್ಬ ಪಾದ್ರಿಯಾಗಿರುತ್ತಿದ್ದೆ. ಇಲ್ಲಿರುವ ಈ ಚರ್ಚಿನಲ್ಲಿ ಬಿಷಪ್ ಆಗಿದ್ದರೂ ಆಶ್ಚರ್ಯಪಡುವಂತಿರಲಿಲ್ಲ. ನಿನಗೆ ಅಂತಹ ಸಾಮರ್ಥ್ಯವಿತ್ತು.” ಎಂದಳು.

ನೀತಿ: ಮಕ್ಕಳು ಎಷ್ಟೇ ದೊಡ್ಡವರಾದರೂ ತಾಯಿಯ ಮುಗ್ಧ ಮನಸ್ಸಿಗೆ ಅವರೆಂದೂ ಮಕ್ಕಳೇ!

Leave a Reply

Your email address will not be published. Required fields are marked *