Breaking News

ಸತ್ಪುರುಷರ ಸಹವಾಸದಿಂದ ಕಬ್ಬಿಣವೂ ಚಿನ್ನವಾಗ ಬಲ್ಲದು | ನೀತಿ ಕಥೆಗಳು 6 [Kannada Moral Stories 6]

ಸತ್ಪುರುಷರ ಸಹವಾಸದಿಂದ ಕಬ್ಬಿಣವೂ ಚಿನ್ನವಾಗ ಬಲ್ಲದು | ನೀತಿ ಕಥೆಗಳು 6 [Kannada Moral Stories 6]

ಒಬ್ಬ ಯೋಗಿ ಇದ್ದನು. ಒಂದು ದಿನ ಅರ್ಧರಾತ್ರಿಯ ಸಮಯದಲ್ಲಿ ಒಬ್ಬ ಕಳ್ಳನು ಯೋಗಿಯ ಕುಟೀರದೊಳಕ್ಕೆ ನುಗ್ಗಿದನು. ಹಣತೆಯ ಮಂದ ಪ್ರಕಾಶದಲ್ಲಿ ಆಶ್ರಮದಲ್ಲಿ ಯಾವುದಾದರೂ ಬೆಲೆ ಬಾಳುವ ವಸ್ತುಗಳು ದೊರಕುತ್ತವೇನೋ ಎಂದು ಹುಡುಕತೊಡಗಿದನು.

ಭಕ್ತರು ತಟ್ಟೆಯಲ್ಲಿ ಹಾಕಿದ ಕೆಲವು ನಾಣ್ಯಗಳು, ಕೆಲವು ಪಾತ್ರೆಗಳಲ್ಲದೆ ಬೇರೇನೂ ಕಾಣಿಸಲಿಲ್ಲ. ಬಂದುದಕ್ಕೇ ಅವಾದರೂ ಸಿಕ್ಕಿತಲ್ಲಾ ಎಂದು ಕೊಂಡನು ಕಳ್ಳನು. ಅಲ್ಲದೆ, ಆ ಕುಟೀರಕ್ಕೆ ಪ್ರವೇಶಿಸಲು ಅವನು ಹೆಚ್ಚು ಶ್ರಮವನ್ನೂ ಪಟ್ಟಿರಲಿಲ್ಲ ವಾಸ್ತವವಾಗಿ ಅದರ ಬಾಗಿಲು ಕೂಡಾ ಮುಚ್ಚಿರಲಿಲ್ಲ.

ನಾಣ್ಯಗಳನ್ನೂ, ಪಾತ್ರೆಗಳನ್ನೂ ಕಳ್ಳನು ಒಂದು ಚೀಲದಲ್ಲಿ ಹಾಕಿಕೊಳ್ಳುತ್ತಿದ್ದಾಗ ಒಂದು ಪಾತ್ರೆ ಕೈಜಾರಿ ಕೆಳಗೆ ಬಿದ್ದು ಸದ್ದುಂಟಾಯಿತು.

ಆ ಸಮಯದಲ್ಲಿ ಕಳ್ಳನು. ಕುಟೀರದಲ್ಲಿ ಯೋಗಿಯೊಬ್ಬನೇ ಇರುವುದಾಗಿ ಭಾವಿಸಿದ್ದನು. ” ನಾರಾಯಣ!” ಎಂದು ಯೋಗಿ ಅಂದದ್ದು ಕೇಳಿಸಿ, ಈಗ ಅವನೊಡನೆ ನಾರಾಯಣನೆಂಬ ವ್ಯಕ್ತಿಯೂ ಇರುವುದಾಗಿ ಅನುಮಾನಿಸಿ ನಡುಗಿ ಹೋದನು. ಚೀಲವನ್ನು ಅಲ್ಲಿಯೇ ಬಿಟ್ಟು ಹೊರಕ್ಕೆ ಓಡತೊಡಗಿದನು.

ಸ್ವಲ್ಪ ದೂರ ಹೋದಾಗ ಹಿಂದೆ ಹೆಜ್ಜೆಯ ಸಪ್ಪಳವು ಕೇಳಿ ಬಂದಿತು. ನಾರಾಯಣನ ಹೆಜ್ಜೆಯ ಶಬ್ದವೋ ಏನೋ ಎಂದು ಕಳ್ಳನು ಮತ್ತಷ್ಟು ವೇಗವಾಗಿ ಓಡತೊಡಗಿದನು. ಆದರೆ, ಮತ್ತೆ ಸ್ವಲ್ಪ ಹೊತ್ತಿಗೆಲ್ಲಾ ಅವನ ಹೆಗಲನ್ನು ಯಾರೋ ಮುಟ್ಟಿದಂತಾಯಿತು. ಕಳ್ಳನು ಹಿಂದಿರುಗಿ ನೋಡಿದನು.

“ನಾರಾಯಣಾ, ಚೀಲದಲ್ಲಿ ಹಾಕಿಕೊಂಡುದನ್ನು ಅಲ್ಲಿಯೇ ಬಿಟ್ಟು ಏಕೆ ಹೀಗೇ ಓಡಿ ಹೋಗುತ್ತಿರುವೆ!” ಎನ್ನುತ್ತಾ ಯೋಗಿಯು, ಚೀಲವನ್ನು ಕೊಟ್ಟನು.

ಯೋಗಿಯು ಪ್ರತಿಮಾನವನಲ್ಲೂ ನಾರಾಯಣನನ್ನು, ಅಂದರೆ ದೇವರನ್ನು ದರ್ಶಿಸುತ್ತಿರುವಂತೆ ಆ ಕಳ್ಳನಿಗೆ ಆಗ ಅರ್ಥವಾಯಿತು. ಯೋಗಿಗೆ ಯಾವುದರ ಮೇಲೆಯೂ ಆಸಕ್ತಿ ಇರದು. ಆದ್ದರಿಂದ ತನ್ನ ಕುಟೀರದಲ್ಲಿದ್ದ ವಸ್ತುಗಳನ್ನು ತೆಗೆದುಕೊಂಡು ಕಳ್ಳನು ಸಂತೋಷವಾಗಿದ್ದರೆ ಸಾಕು ಎಂದು ಕೊಂಡನು. ಮೇಲಾಗಿ, ತನಗೇ ಅವುಗಳ ಅವಶ್ಯಕತೆಯೂ ఇరబిల్ల.

ಕಳ್ಳನು ಯೋಗಿಯು ಪಾದಗಳ ಮೇಲೆ ಬಿದ್ದು ನಮಸ್ಕರಿಸಿ, ಅಲ್ಲಿಂದ ಹೊರಟು ಹೋದನು.

ಕೆಲವು ವರ್ಷಗಳು ಉರುಳಿ ಹೋದುವು. ಒಮ್ಮೆ ಸ್ವಾಮಿ ವಿವೇಕಾನಂದರು ಹಿಮಾಲಯದಲ್ಲಿ ಸಂಚರಿಸುತ್ತಿದ್ದಾಗ, ಒಬ್ಬ ತೇಜೋಮೂರ್ತಿಯು ಉನ್ನತ ಮಟ್ಟದ ಆಧ್ಯಾತ್ಮಕ ಅನುಭವಗಳನ್ನು ಹೊಂದಿದವನಾಗಿ ಅವರ ಎದುರಿಗೆ ಬಂದನು.

ಆ ವ್ಯಕ್ತಿಯು ಬೇರೆ ಯಾರೂ ಆಗಿರಲಿಲ್ಲ. ಬಾಬಾನ ಕುಟೀರದಲ್ಲಿ ಕಳವು ಮಾಡಲು ಹೋಗಿದ್ದ ಕಳ್ಳನೇ! ಅವನೀಗ ಮರುಜನ್ಮವನ್ನು ಎತ್ತಿದಂತಾಗಿತ್ತು. ಅದುವರೆಗೂ ಪಾಪಕರ್ಮಗಳಲ್ಲೇ ಮುಳುಗಿದ್ದ ಅವನ ಬಾಳು ಆ ಕ್ಷಣದಿಂದಲೇ ಪರಿವರ್ತಿತವಾಗಿ ಹೋಗಿತ್ತು. ಚಿಲ್ಲರೆ ಕಳ್ಳತನಕ್ಕೆ ಹೋದ ತನಗೆ ಎಂದೂ ಅಳಿಯದ ಐಶ್ವರ್ಯವು ದೊರೆತಂತಾಯಿತು ಎಂದು ಆನಂದ ಹೊಂದಿದನು.

ಸ್ವಾಮಿ ವಿವೇಕಾನಂದರು ಅವನ ಕತೆ ಕೇಳಿ, ನಮ್ಮ ಕಣ್ಣಿಗೆ ಪಾಪಾತ್ಕರಂತೆ ಕಂಡವರ ಮೇಲೂ ಆ ಯೋಗಿಯ ಕರುಣಾಕಟಾಕ್ಷವು ನೆಲೆಸಿರುವುದಾಗಿ ಅರ್ಥಮಾಡಿಕೊಂಡರು.

ನೀತಿ: ಸತ್ಪುರುಷರ ಸಹವಾಸದಿಂದ ಕಬ್ಬಿಣವೂ ಚಿನ್ನವಾಗ ಬಲ್ಲದು.

Leave a Reply

Your email address will not be published. Required fields are marked *