Breaking News

ಸಮಯ ಸಂದರ್ಭಕ್ಕನುಸಾರವಾಗಿ ಬುದ್ಧಿಯನ್ನು ಬಳಸಬೇಕು | ನೀತಿ ಕಥೆಗಳು [Kannada Moral Stories 7]

ಸಮಯ ಸಂದರ್ಭಕ್ಕನುಸಾರವಾಗಿ ಬುದ್ಧಿಯನ್ನು ಬಳಸಬೇಕು | ನೀತಿ ಕಥೆಗಳು [Kannada Moral Stories 7]

ಧಾರಾನಗರದ ಮಹಾರಾಜ ಭೋಜರಾಜನು ಆಗಾಗ ವೇಷ ಮರೆಸಿಕೊಂಡು ತನ್ನ ನಾಡಿನಲ್ಲೆಲ್ಲಾ ಸಂಚರಿಸುತ್ತಾ ಜನ ಸಾಮಾನ್ಯರ ಕುಂದು ಕೊರತೆಗಳನ್ನು ಸ್ವತಃ ಅರಿಯುತ್ತಿದ್ದನು.

ಒಂದು ದಿನ ರಾಜನು ವೇಷ ಮರೆಸಿಕೊಂಡು ಕುದುರೆಯೇರಿ ತನ್ನ ರಾಜ್ಯದ ಗಡಿಯ ಬಳಿ ಸಂಚರಿಸುತ್ತಿದ್ದನು. ಆಗ ಒಂದು ಮರದ ಕೆಳಗೆ ಒಬ್ಬ ಬ್ರಾಹ್ಮಣನು ಮಲಗಿರುವುದು ಕಾಣಿಸಿತು. ರಾಜನು ಅವನ ಹತ್ತಿರ ಹೋದನು.

ಆಗ ಒಂದು ಹಾವಿನ ಮರಿ ಆ ಬ್ರಾಹ್ಮಣನ ಮೈ ಮೇಲೆ ಹರಿದಾಡುತ್ತಾ ಅವನ ಬಾಯೊಳಗೆ ಇಳಿಯತೊಡಗಿತು. ಕ್ಷಣಾರ್ಧದಲ್ಲಿ ಇನ್ನು ಹಾವು ಅವನ ಹೊಟ್ಟೆಯನ್ನು ಸೇರಿಕೊಂಡಿತು.

ಆ ಬ್ರಾಹ್ಮಣನು ನಿದ್ದೆಯಿಂದ ಎಚ್ಚೆತ್ತುಕೊಳ್ಳದಿದ್ದರೆ ಹಾವು ವಿಷವನ್ನು ಹೊಟ್ಟೆಯೊಳಗೆ ವಿಸರ್ಜಿಸಿ ಬಿಡುತ್ತದೆ. ಅಂದರೆ ಇವನು ಬದುಕಿ ಉಳಿಯಲಾರ ಎಂದುಕೊಂಡ ಭೋಜರಾಜ.

ಭೋಜರಾಜ ಆ ಬ್ರಾಹ್ಮಣನನ್ನು ಅಲುಗಾಡಿಸಿ. ಎಚ್ಚರಗೊಳ್ಳುವಂತೆ ಮಾಡಿದ. ಅವನನ್ನು ಕುದುರೆಯ ಮೇಲೆ ಹಾಕಿಕೊಂಡು ಸ್ವಲ್ಪ ದೂರ ಸಾಗಿದ ಮೇಲೆ ರಸ್ತೆಯ ಒಂದು ಬದಿಯಲ್ಲಿನ ಗುಡಿಸಲಿನ ಬಳಿ ಒಂದು ಹಸುಗಳ ಮಂದೆ ಇರುವುದನ್ನು ಕಂಡ.

ಆ ಬ್ರಾಹ್ಮಣನನ್ನು ಅಲ್ಲಿಗೆ ಕರೆದುಕೊಂಡು ಹೋಗಿ, ಅಲ್ಲಿದ್ದ ಬಾನಿಯಿಂದ ಹಸುಗಳು ಕುಡಿಯುವ ಮುಸುರೆಯನ್ನು ತುಂಬಿಕೊಂಡು ಅವನಿಗೆ ಬಲವಂತವಾಗಿ ಕುಡಿಸತೊಡಗಿದ. ಆ ಬ್ರಾಹ್ಮಣನು ಅದನ್ನು ಕುಡಿಯಲು ವಿರೋಧಿಸಿದ. ಕಿರುಚಾಡಿದ. ಓಡಿ ಹೋಗಲು ಪ್ರಯತ್ನಿಸಿದ. ಕೊನೆಗೆ ವಾಂತಿ ಮಾಡಿಕೊಳ್ಳತೊಡಗಿದ. ಅದರೊಂದಿಗೆ ಸತ್ತ ಹಾವಿನ ಮರಿಯೂ ಹೊರಬಿತ್ತು.

ಅವನು ಚೇತರಿಸಿಕೊಂಡು ಎದುರಿಗೆ ಬಿದ್ದಿದ್ದ ಹಾವನ್ನು ನೋಡಿ, “ಅಯ್ಯಾ ಪ್ರಾಣದಾತ! ನನ್ನ ಬಾಯೊಳಗೆ ಹಾವು ಇಳಿದದ್ದನ್ನು ತಿಳಿಸಿದ್ದರೆ ಈ ಚಿಕಿತ್ಸೆಯನ್ನು ನಾನು ನಿರಾಕರಿಸುತ್ತಿರಲಿಲ್ಲ!” ಎಂದ.

ಭೋಜರಾಜನು, “ನಾನು ಹಾಗೆ ನಿಜ ಹೇಳಿದ್ದರೆ ಭಯದಿಂದ ನೀನು ಪ್ರಾಣವೇ ಬಿಡಬಹುದಿತ್ತು!” ಎಂದು ಹೇಳಿ ಕುದುರೆಯೇರಿ ರಾಜಧಾನಿಯತ್ತ ಹೊರಟ.

ನೀತಿ: ಸಮಯ ಸಂದರ್ಭಕ್ಕನುಸಾರವಾಗಿ ಬುದ್ಧಿಯನ್ನು ಬಳಸಬೇಕು.

Leave a Reply

Your email address will not be published. Required fields are marked *