Breaking News

Leon Trotsky Biography in Kannada

ಲಿಯಾನ್ ಟ್ರಾಟ್‌ಸ್ಕಿ ಜೀವನ ಚರಿತ್ರೆ – Leon Trotsky Biography in Kannada

ಲಿಯಾನ್ ಟ್ರಾಟ್‌ಸ್ಕಿ ಜೀವನ ಚರಿತ್ರೆ – Leon Trotsky Biography in Kannada

ರಷ್ಯಾದ ಇತಿಹಾಸದಲ್ಲಿ ಟ್ರಾಟ್‌ಸ್ಕಿಯದು [Leon Trotsky] ಒಂದು ದೊಡ್ಡ ಹೆಸರು. ಪ್ರತಿಭಾವಂತ, ತತ್ವನಿಷ್ಯ, ಯುವಜನರ ಮೆಚ್ಚಿನ ನಾಯಕ, ದೇಶದ ಭವಿಷ್ಯದ ಬಗ್ಗೆ ಅಪಾರ ಆಕಾಂಕ್ಷೆಗಳನ್ನು ಹೊಂದಿದ್ದ ಇವನು ಲೇಖಕ. ಪ್ರಖ್ಯಾತ ವಾಗಿ ಹಾಗೂ ಮಹಾನ್ ಕ್ರಾಂತಿಕಾರಿ, ಸಮತಾವಾದಿ ಲೆನಿನ್‌ನ ಬಲಗೈ ಬಂಟನಂತಿದ್ದು 1917ರ ಕ್ರಾಂತಿಯ ವೇಳೆಯಲ್ಲಿ ಕೆಂಪು ಸೈನ್ಯ ಕಟ್ಟಿ, ಕ್ರಾಂತಿಯನ್ನು ಯಶಸ್ಸಿನತ್ತ ಒಯ್ದ ಮಹಾನ್ ರಾಜಕೀಯ ಧುರೀಣ,

ಲಿಯಾನ್ ಟ್ರಾಟ್‌ಸ್ಕಿ ಉಕ್ರೈನಿನ ಯನೊವ್ಯದಲ್ಲಿ ಅಕ್ಟೋಬರ್ 26, 1879ರಲ್ಲಿ ಜನಿಸಿದ. ಇವನ ತಂದೆ ದವಿಡ್‌ ಲಿಯೊಂಟೆವಿಕ್ ಬ್ರೋನ್ ಸ್ಟೈನ್ (Davyd Leontievich Bronstein) ಓರ್ವ ಯಹೂದಿ ರೈತ. ಗಣಿತಶಾಸ್ತ್ರ ಅಧ್ಯಯನಕ್ಕಾಗಿ ಒಡೆಸ್ಸದ (odessa) ಹೊಸ ರಷ್ಯನ್’ ವಿಶ್ವ ವಿದ್ಯಾಲಯ ಸೇರಿದ ಟ್ರಾಟಸ್ಕಿ ಸಮತಾವಾದಿಗಳ ಸಂಘದಲ್ಲಿ ಸೇರಿ ಪೂರ್ಣ ಪ್ರಮಾಣದ ಕ್ರಾಂತಿಕಾರಿ ಯಾದ. ಪರಿಣಾಮವಾಗಿ ದಸ್ತಗಿರಿಯಾಗಿ ಹೊರದೂಡಲ್ಪಟ್ಟು, ಸೈಬೀರಿಯ ಸೇರಿದ. 1902ರಲ್ಲಿ ತಪ್ಪಿಸಿಕೊಂಡು ಬಂದು ಲೆನಿನ್‌ನ ಇಷ್ಟ ಸಂಘಟನೆಯಲ್ಲಿ ಸೇರಿಕೊಂಡನು.

ನಂತರ ಸೋಷಿಯೊ ಡೆಮೊಕ್ರಟಿಕ್ ಪಕ್ಷ ಛಿದ್ರಗೊಳ್ಳಲಾಗಿ ಲೆನಿನ್ನನ ವಿರೋಧಿ ಬಣವಾದ ಮೆನ್‌ಷೆವಿಕ್ (Menshevik) ಸದಸ್ಯನಾದ. 1905ರಲ್ಲಿ ಸಂಭವಿಸಿದ ಕ್ರಾಂತಿಯಲ್ಲಿ ರಷ್ಯಾ ಪ್ರವೇಶಿಸಿದ ಇವನು ಮತ್ತೊಮ್ಮೆ ದೇಶದಿಂದ ಹೊರದೂಡಲ್ಪಟ್ಟನು. ಕ್ರಮೇಣ ಸೋಸಿಯಲ್ ಡೆಮೋಕ್ರಟಿಕ್ ಪಕ್ಷ ಮತ್ತೆ ಮತ್ತೆ ಒಡೆದು ಹಲವು ಗುಂಪುಗಳಾಗಿ ಮಾರ್ಪಟ್ಟಿತು. ಮತ್ತೊಮ್ಮೆ ದಸ್ತಗಿರಿಯಾದ ಟ್ರಾಟ್‌ಸ್ಕಿ ಈ ಬಾರಿ ವಿಯನ್ನಾ ತಲುಪಿ ಅಲ್ಲಿ ತನ್ನಲ್ಲಿ ನಂಬಿಕೆ ಇಟ್ಟವರ ಗುಂಪೊಂದನ್ನು ತಯಾರುಮಾಡಿ ‘ಪ್ರಾವ’ ಎಂಬ ಪತ್ರಿಕೆಯನ್ನು ಪ್ರಕಟಿಸತೊಡಗಿದ. ಛಿದ್ರಗೊಂಡಿದ್ದ ಬಣಗಳನ್ನು ಒಟ್ಟುಗೂಡಿಸಲು ಮತ್ತೊಮ್ಮೆ ನಡೆಸಿದ ಯತ್ನವೂ ಈಡೇರಲಿಲ್ಲ.

ಈ ಮಧ್ಯೆ ಪ್ರಥಮ ಮಹಾಯುದ್ಧ ಸಂಭವಿಸಿತು. ವಿಯನ್ನಾವನ್ನು ಬಿಟ್ಟು ಹೊರಟ ಟ್ರಾಟಿಸ್ಕಿ ಸ್ವಿಟ್ಸರ್‌ಲ್ಯಾಂಡ್ ನಂತರ ಫ್ರಾನ್ಸ್‌ಗೆ ಭೇಟಿ ಇತ್ತ. ಫ್ರಾನ್ಸಿನಿಂದ ಹೊರದೂಡ ಲ್ಪಟ್ಟು ಅಮೆರಿಕ ಸೇರಿದವನು 1917ರ ಮಾರ್ಚಿಯಲ್ಲಿ ರಷ್ಯಾಕ್ಕೆ ಮರಳಿ ಪೆಟ್ರೋಗ್ರಾಡ್‌ನಲ್ಲಿದ್ದ ‘ಇಂಟರ್ ಡಿಸ್ಟ್ರಿಕ್ಟ್’ ಗುಂಪು ಸೇರಿದ. ನಂತರ ಲೆನಿನ್‌ನ ಪೂರ್ಣ ಕ್ರಾಂತಿಯ ಕರೆಗೆ ಓಗೊಟ್ಟು ಬೊಲ್‌ಷೆವಿಕ್ ಸೇರಿ ಪಕ್ಷದ ಸೆಂಟ್ರಲ್ ಕಮಿಟಿಗೆ ಚುನಾಯಿತನಾದ. ಜುಲೈನಲ್ಲಿ ನಡೆಸಿದ ಸಣ್ಣ ಕ್ರಾಂತಿಯು ವಿಫಲವಾಗಿ ಟ್ರಾಟಿಸಿ ಸೆರೆಮನೆ ಸೇರಿದ. ಅಲ್ಲಿಂದ ಬಿಡುಗಡೆಯಾದ ಮೇಲೆ ಸೋವಿಯತ್ ವರ್ಕರ್ ಪಾರ್ಟಿಯ ಅಧ್ಯಕ್ಷನಾಗಿ ಆರಿಸಿ ಬಂದು ರಾಜಧಾನಿಯಲ್ಲಿ ಅಧಿಕಾರ ಕಸಿದುಕೊಳ್ಳುವ ತಯಾರಿ ನಡೆಸಿದ.

ಕ್ರಾಂತಿಯ ವೇಳೆ ರೆಡ್ ಆರ್ಮಿ ಸಜ್ಜುಗೊಳಿಸಿ ಅಧಿಕಾರ ಕಸಿದುಕೊಳ್ಳುವಲ್ಲಿ ಲೆನಿನ್‌ಗೆ ಇವನ ಪರಿಶ್ರಮ ಅಪಾರವಾದುದಾಗಿತ್ತು. ರೆಡ್ ಆರ್ಮಿಯ ಶಿಲ್ಪಿ ಎಂದೇ ಖ್ಯಾತನಾದ ಟ್ರಾಟ್‌ಸ್ಕಿ ಕ್ರಾಂತಿಯ ನಂತರ ಲೆನಿನ್ ಸರ್ಕಾರದಲ್ಲಿ ವಿದೇಶಾಂಗ ಖಾತೆ, ಮಿಲಿಟರಿ ಮತ್ತು ನೌಕಾಪಡೆಯ ಪೀಪಲ್ಸ್ ಕಮಿಸ್ಸರ್‌ (People’s Commissar) ಆಗಿ ಸೇವೆ ಸಲ್ಲಿಸಿದ, ದೇಶದಲ್ಲಿ ಅಂತಃಕಲಹವನ್ನು ಹತ್ತಿಕ್ಕಿ, ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಿದ.

ಬರಗಾಲದ ಬೇಗೆಯಿಂದ ಜನರನ್ನು ಪಾರು ಮಾಡಿದ್ದ. ವಿದೇಶಗಳಾದ ಅಮೆರಿಕ, ಇಂಗ್ಲೆಂಡ್, ಫ್ರಾನ್ಸ್ ಜೆಕೋಸ್ಕೊವಾಕಿಯ, ಜಪಾನ್ ಮೊದಲಾದ ದೇಶಗಳು ರಷ್ಯಾದಲ್ಲಿನ ಕಮ್ಯುನಿಸ್ಟ್ ಸರ್ಕಾರದ ಗೋಜಿಗೆ ಬರದಂತೆ ಸೇನೆಯನ್ನು ಬಲಪಡಿಸಿದ. ಪಕ್ಷದಲ್ಲಿ ಶಿಸ್ತು ಮತ್ತು ನಿಷ್ಠೆಯನ್ನು ತರುವಲ್ಲಿ ಕೂಡ ಯಶಸ್ವಿಯಾದ. ದಕ್ಷತೆಗೆ ಹೆಸರಾಗಿದ್ದ ಟ್ರಾಟ್‌ಸ್ಕಿ ಮಹಾನ್ ಬುದ್ಧಿಶಾಲಿಯೂ ಆಗಿದ್ದು ಯುವಜನತೆಯ ಮನ ಗೆದ್ದಿದ್ದ. ಆದರೆ ಕೆಲವೊಮ್ಮೆ ಅಹಂಕಾರದಿಂದಲೂ ಬೀಗುತ್ತಿದ್ದ. ಪರಿಣಾಮವಾಗಿ ಅಸೂಯಾಪರ ಶತ್ರುಗಳನ್ನೂ ಸಂಪಾದಿಸಿದ್ದ.

ಅಂತರ್‌ಯುದ್ಧಾ ನಂತರ ಪಾಲಿಟ್ ಬ್ಯೂರೊ ಕಮ್ಯುನಿಸ್ಟ್ ಸಿದ್ಧಾಂತವನ್ನು ತಾತ್ಕಾಲಿಕವಾಗಿ ಸ್ವಲ್ಪ ಮಾರ್ಪಾಡು ಮಾಡಿದ್ದರಿಂದ ಅಲ್ಲಿ ಸಣ್ಣ ಪ್ರಮಾಣದಲ್ಲಿ ಬಂಡವಾಳಶಾಹಿಯಿತ್ತು. ಇದು ಆ ದೇಶದ ಆರ್ಥಿಕ ವ್ಯವಸ್ಥೆ ಸುಧಾರಿಸಲು ಸಹಾಯಕವಾಗಿತ್ತು. ಆದರೆ, ಇಂತಹ ಮಾರ್ಪಾಡುಗಳಲ್ಲಿ ನಂಬಿಕೆ ಯಿಲ್ಲದ ಟ್ರಾಟ್‌ಸ್ಕಿ ಕಮ್ಯುನಿಸ್ಟ್ ಪ್ರಣಾಳಿಕೆಯನ್ನು ಕಟ್ಟುನಿಟ್ಟಾಗಿ ಜಾರಿಗೆ ತಂದನು. ಸಾಮೂಹಿಕ ಕೃಷಿ ಅಸ್ತಿತ್ವಕ್ಕೆ ಬಂದಿತು. ಕೈಗಾರಿಕೆಗಳ ರಾಷ್ಟ್ರೀಕರಣವಾಯಿತು. ಇದರಿಂದ ಮತ್ತೆ ಅರಾಜಕತೆ ಮರುಕಳಿಸುತ್ತದೆ ಎಂದು ಕಮ್ಯುನಿಸ್ಟ್ ನಾಯಕರುಗಳು ಹೆದರಿದರು.

ಯಾವ ಮುಲಾಜಿಗೂ ಬಗ್ಗದ ಟ್ರಾಟ್‌ಸ್ಕಿಯ ಆಡಳಿತದ ಅನುಭವವಿದ್ದ ಅವರು, ಅವನು ಅಧಿಕಾರಕ್ಕೆ ಬಂದರೆ ತಮ್ಮ ಸ್ಥಾನಗಳಿಗೇ ಸಂಚಕಾರ ಬರಬಹುದು ಎಂದು ಅನುಮಾನಪಟ್ಟರು. ಹೀಗೆ ವೈಯಕ್ತಿಕ ದ್ವೇಷದ, ಜೊತೆಗೆ ಸೈದ್ಧಾಂತಿಕ ನಿಲುವಿನಲ್ಲಿದ್ದ ಭಿನ್ನಾಭಿಪ್ರಾಯಗಳು ಮತ್ತು ರಾಜಕೀಯ ಕಲಹಗಳು ಕೂಡ ಅವರು ಟ್ರಾಟ್‌ಸ್ಕಿಯ ನಾಯಕತ್ವವನ್ನು ವಿರೋಧಿಸಲು ಕಾರಣವಾಯಿತು.

ಟ್ರಾಟ್‌ಸ್ಕಿ ಬೆಂಬಲ ಗಳಿಸಿಕೊಳ್ಳುವ ಮೊದಲು ಅವನನ್ನು ರಾಜಕೀಯವಾಗಿ ಮುಗಿಸಲು ಅವರು ತೀರ್ಮಾನಿಸಿದರು. ಅವರಲ್ಲಿ ಮುಖ್ಯರಾದವರು ಪೆಟ್ರೋಗ್ರಾಪ್ ಕಮ್ಯುನಿಸ್ಟ್ ಪಕ್ಷದ ಗ್ರಿಗೊರಿ ಝನೋವಿನ್, ಮಾಸ್ಕೊ ಕಮ್ಯುನಿಸ್ಟ್ ಪಕ್ಷದ ನಾಯಕ ಲೆವ್‌ಕಮನೆವ್, ಸುಪ್ರೀಮ್ ಕೌನ್ಸಿಲ್ ಆಫ್ ನ್ಯಾಷನಲ್‌ ಎಕಾನಮಿಯ ಅಧ್ಯಕ್ಷ ಅಲೆಕ್ಸಿ ರೈಕೋವಂ, ಚತುರ ವಾಗಿ ಮತ್ತು ಸಂಪಾದಕ ನಿಖಿಲಮ್ ಬುಖಾರಿನ್ ಮತ್ತು ಕಮ್ಯುನಿಸ್ಟ್ ಪಕ್ಷದ ಪ್ರಧಾನ ಕಾರ್ಯದರ್ಶಿ ಜೋಸೆಫ್ ಸ್ಟಾಲಿನ್,

1924ರಲ್ಲಿ ಲೆನಿನ್ ಗತಿಸಿದಾಗ ಅವನ ಶವಸಂಸ್ಕಾರ ಸಮಯದಲ್ಲಿ ಪಾಲ್ಗೊಳ್ಳುವ ಅವಕಾಶ ಟ್ರಾಟ್‌ಸ್ಕಿಗಿಲ್ಲವಾಗಿತ್ತು. ಅನಾರೋಗ್ಯದ ನಿಮಿತ್ತ ವೈದ್ಯರ ಸಲಹೆಯ ಮೇರೆಗೆ ಕಪ್ಪು ಸಮುದ್ರ ತೀರದ ಸುಖಮಿ ಆರೋಗ್ಯಧಾಮಕ್ಕೆ ವಿಶ್ರಾಂತಿಗಾಗಿ ಹೋಗಿದ್ದ, ಲೆನಿನ್‌ನ ಬಲಗೈಯಾಗಿದ್ದು ಅನೇಕ ಕ್ಲಿಷ್ಟ ಸಂದರ್ಭಗಳಲ್ಲಿ ಅವನೊಡನಿದ್ದು ಮೆಚ್ಚುಗೆ ಗಳಿಸಿದ್ದ ಟ್ರಾಟಿಸ್ಕಿಯನ್ನು ಲೆನಿನ್ ತನ್ನ ಉತ್ತರಾಧಿಕಾರಿಯನ್ನಾಗಿ ಮಾಡಬೇಕೆಂದುಕೊಂಡಿದ್ದ.

ಆದರೆ ಅವನ ಶತ್ರುಗಳು ಟ್ರಾಟ್‌ಸ್ಕಿಯನ್ನು ಅಂತಹ ಸಂದರ್ಭದಿಂದ ದೂರವಿಡಲೆಂಬ ಉದ್ದೇಶದಿಂದಲೇ ಶವಸಂಸ್ಕಾರದ ದಿನವನ್ನು ಒಂದು ದಿನ ಮುಂದೂಡಿರುವುದಾಗಿ ಸುಳ್ಳು ಸುದ್ದಿ ಮುಟ್ಟಿಸಿದ್ದರು. ಇವನ ಶತ್ರುಗಳಾದ ಕಮ್ಯುನಿಸ್ಟ್ ನಾಯಕರು, ಟ್ರಾಟಿಸ್ಕಿ ಶವ ಸಂಸ್ಕಾರಕ್ಕೆ ಬರಬಾರದು : ಹಾಗೆ ಬರದಿದ್ದರೆ ಜನರಿಗೆ ಅಸಮಾಧಾನವಾಗುತ್ತದೆ ; ಆ ಮೂಲಕ ಅವನನ್ನು ರಾಜಕೀಯ ಅಧಿಕಾರದಿಂದ ದೂರವಿಡಬಹುದೆಂಬುದು ಸ್ಟಾಲಿನ್‌ನ ಯೋಜನೆಯಾಗಿದ್ವಿತು. ಮೇಲಾಗಿ ಉನ್ನತ ಪದವಿಯನ್ನಾಗಲಿ, ಹೆಚ್ಚು ಅಧಿಕಾರವನ್ನಾಗಲಿ ಅವನಿಗೆ ಕೊಡುವ ಮನಸ್ಸು ಅವರುಗಳಿಗಿರಲಿಲ್ಲ.

ಟ್ರಾಟ್‌ಸ್ಕಿ ಬರುವುದನ್ನು ಯಶಸ್ವಿಯಾಗಿ ತಡೆದ ಸ್ಟಾಲಿನ್ ಶವಸಂಸ್ಕಾರ ಸಮಾರಂಭಗಳಲ್ಲಿ ಪ್ರಮುಖವಾಗಿ ಕಾಣಿಸಿಕೊಂಡ. ಟ್ರಾಟಿಸ್ಕಿಯಲ್ಲಿ ಹೆಚ್ಚು ನಂಬಿಕೆ ಇಟ್ಟಿದ್ದ ಲೆನಿನ್ ಸಾಯುವುದಕ್ಕೆ ಮುಂಚೆ ಅವನನ್ನು ಅಧಿಕಾರ ರೂಢನನ್ನಾಗಿಸಬೇಕೆಂದು ಉಯಿಲನ್ನು ಬರೆದಿಟ್ಟಿದ್ದ. ಅದನ್ನೂ ಕೂಡ ಸ್ಟಾಲಿನ್ ಹಾಗೂ ಸಹಚರರು ಬಹಿರಂಗಪಡಿಸದೆ ಬಚ್ಚಿಟ್ಟರು.

ಅಧಿಕಾರಕ್ಕೇರಿದ ಸ್ಟಾಲಿನ್ ಟ್ರಾಟ್‌ಸ್ಕಿಯನ್ನು ರಾಜಕೀಯವಾಗಿ ಮುಗಿಸಿಬಿಡಲು ಯೋಜನೆ ರೂಪಿಸಿಕೊಳ್ಳಲಾರಂಬಿಸಿದ. ಅವನ ಮೇಲೆ ಅಪಪ್ರಚಾರ ಮಾಡಲಾಯಿತು. ಅವನು ಕ್ರಾಂತಿಗಿಂತ ಮೊದಲು ಲೆನಿನ್‌ನ ತತ್ವಗಳ ವಿರುದ್ಧ ಮಾಡಿದ ಟೀಕೆಯನ್ನು ಮತ್ತೆ ಕೆದಕಿ ತೆಗೆದರು. ಟ್ರಾಟ್‌ ಬೊಲ್ಸ್ವಿಕ್‌ ವಿರೋಧಿ ಮತ್ತು ಲೆನಿನ್ ವಿರೋಧಿ ಎಂದು ಕರೆಯಲಾಯಿತು. ಅವನ ಪ್ರಗತಿಪರ ಆರ್ಥಿಕ ಚಿಂತನೆಗಳು ದೇಶಕ್ಕೆ ಅಪಾಯಕಾರಿ ಎಂದು ಸುದ್ದಿ ಮಾಡಲಾಯಿತು.

ಈ ಎಲ್ಲಾ ಒತ್ತಡಗಳನ್ನು ತಾಳಲಾರದೆ 1925ರಲ್ಲಿ ಟ್ರಾಟಸ್ಕಿ ತನ್ನ ಮಂತ್ರಿ ಪದವಿಗೆ ರಾಜೀನಾಮೆ ನೀಡಿದ. ಹೀಗೆ ಅಧಿಕಾರದಿಂದ ದೂರ ಸರಿದರೂ ಟ್ರಾಟ್‌ಸ್ಕಿಯು ಯಾವ ಸಮಯದಲ್ಲಿ ಹೇಗೆ ಮೇಲೆ ಬರುವನೋ ಎಂಬ ಸಂಶಯ ಸ್ಟಾಲಿನ್ನನನ್ನು ಕಾಡಿತು. ಹಾಗಾಗಿ ಇತರ ಶತ್ರುಗಳನ್ನು ನಿಗ್ರಹಿಸಿದಂತೆ ಟ್ರಾಟಸ್ಕಿಯನ್ನು ಮುಗಿಸಲು ಸಂಚು ಹೂಡಿದ. ಇತರ ಕೆಲವರಂತೆ ಶರಣಾಗದ ಟ್ರಾಟ್‌ಸ್ಕಿ 1929ರಲ್ಲಿ ದೇಶಾಂತರ ಹೊರಟು ಮೆಕ್ಸಿಕೊದಲ್ಲಿ ರಾಜಕೀಯ ಆಶ್ರಯ ಪಡೆದ.

ಹೀಗೆ ಟ್ರಾಟ್‌ಸ್ಕಿ ದೇಶದಿಂದ ದೂರ ಸರಿದರೂ ಸ್ಟಾಲಿನ್‌ಗೆ ನಿದ್ರೆ ಬರಲಿಲ್ಲ. ಕಾರಣ ಯುವ ರಷ್ಯನ್ ಪೀಳಿಗೆಯ ಮೇಲೆ ಅವನ ಪ್ರಭಾವ ಅಷ್ಟೊಂದು ಗಾಢವಾದು ದಾಗಿತ್ತು. ಕೊನೆಗೆ ಅವನ ಆಜ್ಞೆಯ ಮೇರೆಗೆ ಮೆಕ್ಸಿಕೋಗೆ ಬಂದ ಬಾಕ್ಸನ್ ಆಗಸ್ಟ್ 20, 1940ರಂದು ಟ್ರಾಟಸ್ಕಿಯನ್ನು ಕೊಲೆ ಮಾಡಿದ. ಕೊನೆಯುಸಿರೆಳೆಯುವಾಗ ಟ್ರಾಟ್‌ಸ್ಕಿ ತನ್ನ ಅನುಯಾಯಿಗಳನ್ನು ಕುರಿತು “ನಾನು ರಾಜಕೀಯ ಕೊಲೆಗಾರನ ಹೊಡೆತದಿಂದಾಗಿ ಮರಣಶಯ್ಯೆಯಲ್ಲಿದ್ದೇನೆ. ನಮಗೆ ಅಂತಿಮವಾಗಿ ಜಯ ಶತಸಿದ್ದ. ದಯವಿಟ್ಟು, ಹೋರಾಟ ಮುಂದುವರಿಸಿ” ಎಂದು ಉಸುರಿದ.

Leave a Reply

Your email address will not be published. Required fields are marked *